ಕರಾವಳಿ

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ
ಮುಡಿಪು: 132 ಕೆಜಿ ಗಾಂಜಾ ಸಹಿತ ಇಬ್ಬರು ಆರೋಪಿಗಳ ಬಂಧನ



ಮಂಗಳೂರು: ಮುಡಿಪು ಸಮೀಪ ಗಾಂಜಾ ಸಾಗಾಟ ಪ್ರಕರಣವೊಂದನ್ನು ಪತ್ತೆಹಚ್ಚಿರುವ ಮಂಗಳೂರು ಸಿಸಿಬಿ ಪೊಲೀಸರು 132 ಕೆಜಿ ಸಂಸ್ಕರಿತ ಗಾಂಜಾ ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಬಂಟ್ವಾಳ ನರಿಂಗನಾ ನಿವಾಸಿ ರಮೀಝ್ ರಾಝ್ (30) ಹಾಗೂ ಕೇರಳ ಕಾಸರಗೋಡು ನಿವಾಸಿ ಅಬ್ದುಲ್ ಖಾದರ್ ಹಾರಿಸ್ (31) ಬಂಧಿತ ಆರೋಪಿಗಳು. ಇವರನ್ನು ಮುಡಿಪು ಕುರ್ನಾಡು ಗ್ರಾಮದ ಕಾಯರ್‌ಗೋಳಿ ಎಂಬಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳಿಂದ ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ ಮಂಗಳೂರು, ಬೆಂಗಳೂರು ಹಾಗೂ ಕೇರಳ ರಾಜ್ಯಕ್ಕೆ ಪೂರೈಕೆ ಮಾಡಲು ಉದ್ದೇಶಿಸಿದ್ದ 132 ಕೆಜಿ ಸಂಸ್ಕರಿತ ಗಾಂಜಾ ಸೇರಿದಂತೆ ಸಾಗಾಟಕ್ಕೆ ಬಳಕೆ ಮಾಡಲಾದ ಕಾರು, ನಗದು, 2 ಮೊಬೈಲ್ ಫೋನ್ ಸೇರಿದಂತೆ ಒಟ್ಟು ಸುಮಾರು 39,15,000 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ 3 ತಲವಾರುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದರು.

ಆರೋಪಿಗಳು ತಲಾ 2 ಕೆಜಿ ಪ್ಯಾಕೇಟ್‌ಗಳನ್ನಾಗಿ ಗಾಂಜಾವನ್ನು ವಾಹನದಲ್ಲಿ ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿಯನ್ನು ಅನುಸರಿಸಿ ಮಂಗಳೂರು ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಸೈ ರಾಜೇಂದ್ರ ಬಿ. ನೇತೃತ್ವದ ಸಿಸಿಬಿ ತಂಡ ಗುರುವಾರ ಕಾರ್ಯಾಚರಣೆ ನಡೆಸಿ ಈ ಪ್ರಕರಣವನ್ನು ಬೇಧಿಸಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.

Leave a Reply

Your email address will not be published. Required fields are marked *

error: Content is protected !!