ಕರಾವಳಿರಾಜಕೀಯರಾಜ್ಯ

ಶಕುಂತಳಾ ಶೆಟ್ಟಿಗಾಗಿ ಅವಕಾಶ ಬಿಟ್ಟುಕೊಟ್ಟಿದ್ದೆ,
ಅವರೂ ನನಗೆ ಅವಕಾಶ ನೀಡಲಿದ್ದಾರೆ : ಕಾವು ಹೇಮನಾಥ ಶೆಟ್ಟಿ


ಪುತ್ತೂರು; ಕಳೆದ 35 ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ, ಅನೇಕ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದೇನೆ, ಪಕ್ಷಕ್ಕಾಗಿ ಅನೇಕ ತ್ಯಾಗಗಳನ್ನು ಮಾಡಿದ್ದೇನೆ. ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಶಕುಂತಳಾ ಶೆಟ್ಟಿಯವರಿಗಾಗಿ ನನಗೆ ಸಿಗಬೇಕಿದ್ದ ಅವಕಾಶವನ್ನು ಅವರಿಗಾಗಿ ಬಿಟ್ಟುಕೊಟ್ಟಿದ್ದೇನೆ ಈ ಬಾರಿ ನಾನು ಸ್ಪರ್ದಿಸಲು ಶಕುಂತಳಾ ಶೆಟ್ಟಿಯವರು ಅವಕಾಶ ಬಿಟ್ಟುಕೊಡಲಿದ್ದಾರೆ ಎಂಬ ಸಂಪೂರ್ಣ ಭರವಸೆ ನನ್ನಲ್ಲಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿ , ಕಾಂಗ್ರೆಸ್‌ ನಾಯಕ ಕಾವು ಹೇಮನಾಥ ಶೆಟ್ಟಿ ಹೇಳಿದ್ದಾರೆ.


ಪುತ್ತೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಬಾರಿ ನನಗೆ ಅವಕಾಶ ಒದಗಿಸಿಕೊಡುವುದಾಗಿ ಶಕುಂತಳಾ ಶೆಟ್ಟಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಮುಂದೆ ಹೇಳಿದ್ದಾರೆ. ನಾವೆಲ್ಲರೂ ಸೇರಿ ಶಕುಂತಳಾ ಶೆಟ್ಟಿಯನ್ನು ಆವತ್ತು ಗೆಲ್ಲಿಸಿದ್ದೇವೆ. ಈ ಬಾರಿ ನಾನು ಸ್ಪರ್ದಿಸಲಿದ್ದೇನೆ, ಎಲ್ಲರೂ ಸೇರಿ ನನಗೆ ಅವಕಾಶವನ್ನು ಮಾಡಿಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

ಕೆಪಿಸಿಸಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಕೂಡಾ ನನಗೆ ಜನ ಬೆಂಬಲ ಇದೆ ಎಂಬುದು ಸಾಬೀತಾಗಿದೆ. ಅವಕಾಶಕ್ಕಾಗಿ ಕೆಪಿಸಿಸಿಗೆ ಅರ್ಜಿ ಹಾಕಿದ್ದೇನೆ. ನಾನು ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ನನಗೆ ಈ ಬಾರಿ ಅವಕಾಶ ದೊರೆಯಲಿದೆ ಎಂಬ ಆಶಾಭಾವ ಇದೆ ಎಂದು ಅವರು ಹೇಳಿದರು.

ಅಶೋಕ್‌ಕುಮಾರ್ ಅವರ ಪಕ್ಷದಲ್ಲಿ ಟಿಕೆಟ್ ಕೇಳಲಿ:
ಕೋಡಿಂಬಾಡಿ ಅಶೋಕ್ ಕುಮಾರ್ ರೈ ಯವರು ಕಾಂಗ್ರೆಸ್ ಪಕ್ಷದಿಂದ ಅವಕಾಶ ಕೇಳಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಹೇಮನಾಥ ಶೆಟ್ಟಿ ಅಶೋಕ್ ರೈ ಯವರು ಬಿಜೆಪಿ ಸದಸ್ಯರು, ಅವರು ಆ ಪಕ್ಷದಿಂದ ಅವಕಾಶ ಕೇಳಬೇಕು. ಕಾಂಗ್ರೆಸ್ ಪಕ್ಷದ ಸದಸ್ಯತ್ವ ಕೂಡಾ ಪಡೆದುಕೊಳ್ಳದ ಅವರು ಅದು ಹೇಗೆ ಕಾಂಗ್ರೆಸ್‌ನಿಂದ ಅವಕಾಶ ಕೇಳುತ್ತಾರೆ ಎಂದರು. ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಅಳೆದುತೂಗಿಯೇ ಅವಕಾಶ ನೀಡುತ್ತದೆ ಎಂದು ಹೇಳಿದರು. ಮಾಜಿ ಸಿಎಂ ಡಿವಿ ಸದಾನಂದ ಗೌಡರು ಅಶೋಕ್ ರೈ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿ ಆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರನ್ನು ಕರೆಸಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಯತ್ನ ನಡೆಸಿದ್ದು ಅದೆಲ್ಲಾ ನಡೆಯುವುದಿಲ್ಲ. ಇಲ್ಲಿ ಕಾರ್ಯಕರ್ತರೇ ಪ್ರಮುಖರು. ಯಾರು ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ ಯಾರು ಕೆಲಸ ಮಾಡಿಲ್ಲ ಎಂಬುದು ಕಾರ್ಯಕರ್ತರಿಗೆ ಗೊತ್ತಿದೆ ಎಂದು ಹೇಮನಾಥ ಶೆಟ್ಟಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!