Uncategorizedರಾಜ್ಯ

ಮೈಸೂರು: ಗುಂಬಜ್‌ ಮಾದರಿಯ ಬಸ್ ನಿಲ್ದಾಣ ತೆರವುಗೊಳಿಸಲು ನೋಟೀಸ್ ಜಾರಿ

ಮೈಸೂರು: ಗುಂಬಜ್‌ ಮಾದರಿಯ ವಿನ್ಯಾಸದಿಂದ ವಿವಾದಕ್ಕೆ ಕಾರಣವಾಗಿರುವ ಊಟಿ ರಸ್ತೆಯ ಜೆಎಸ್‌ಎಸ್‌ ಕಾಲೇಜು ಬಳಿಯ ಬಸ್‌ ನಿಲ್ದಾಣವನ್ನು ಏಳು ದಿನದೊಳಗೆ ತೆರವುಗೊಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಕೆಆರ್‌ಐಡಿಎಲ್‌ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ನ.15ರಂದು ನೋಟಿಸ್‌ ಜಾರಿಗೊಳಿಸಿದೆ.

‘ಹೆದ್ದಾರಿಯಲ್ಲಿ ನಿರ್ಮಿಸುತ್ತಿರುವ ನಿಲ್ದಾಣದ ಕಾಮಗಾರಿ ಸ್ಥಗಿತಗೊಳಿಸುವಂತೆ ಎನ್‌ಎಚ್‌ಎಐ ಎಂಜಿನಿಯರ್‌ಗಳು ಈ ಹಿಂದೆ ಹಲವು ಬಾರಿ ಸೂಚಿಸಿದ್ದರು. ಆದರೂ ನಿರ್ಮಿಸಲಾಗಿದೆ. ಈಗ ಈ ನಿಲ್ದಾಣದ ವಿನ್ಯಾಸದ ವಿಚಾರ ಧಾರ್ಮಿಕ ವಿವಾದದ ಸ್ವರೂಪ ಪಡೆದುಕೊಂಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎನ್‌ಎಚ್‌ಎಐ ಕಾಯ್ದೆ ಅನ್ವಯ ಈ ನೋಟಿಸ್‌ ಜಾರಿಗೊಳಿಸಲಾಗಿದೆ’ ಎಂದು ತಿಳಿಸಲಾಗಿದೆ.

‘ಹೆದ್ದಾರಿಗೆ ಸೇರಿದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿ, ನಿಲ್ದಾಣ ನಿರ್ಮಿಸಿರುವುದು ಸ್ಥಳ ಪರಿಶೀಲನೆ ವೇಳೆ ಕಂಡುಬಂದಿದೆ. ಆದ್ದರಿಂದ, ನೋಟಿಸ್ ಜಾರಿಯಾದ ಏಳು ದಿನಗಳಲ್ಲಿ ಕಟ್ಟಡವನ್ನು ತೆರವುಗೊಳಿಸಬೇಕು. 3 ದಿನದಲ್ಲಿ ವಿವರಣೆ ನೀಡಬೇಕು’ ಎಂದು ಎನ್‌ಎಚ್‌ಎಐನ ರಾಮನಗರ ವಿಭಾಗದ ಯೋಜನಾ ನಿರ್ದೇಶಕರು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

‘ಒಂದು ವೇಳೆ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ, ಎನ್‌ಎಚ್‌ಎಐ ಕಾಯ್ದೆಯಡಿ ದಂಡ ವಿಧಿಸಲಾಗುವುದು’ ಎಂದು ಎಚ್ಚರಿಕೆ ನೀಡಲಾಗಿದೆ.

ಬಸ್ ನಿಲ್ದಾಣದ ವಿಚಾರದಲ್ಲಿ ಶಾಸಕ ಎಸ್.ಎ.ರಾಮದಾಸ್–ಸಂಸದ ಪ್ರತಾಪ ಸಿಂಹ ನಡುವೆ ನಡೆದಿರುವ ಶೀತಲ ಸಮರವನ್ನು ಕಾಂಗ್ರೆಸ್ ಸರಣಿ ಟ್ವೀಟ್‌ಗಳ ಮೂಲಕ ಟೀಕಿಸಿದೆ.
‘ಬಿಜೆಪಿ ವರ್ಸ್‌ಸ್‌ ಬಿಜೆಪಿ ಕಿಚ್ಚು ಎಷ್ಟಿದೆ ಎನ್ನಲು ಪ್ರತಾಪ ಹಾಗೂ ರಾಮದಾಸ್‌ ನಡುವಿನ ಕಾಳಗವೇ ಸಾಕ್ಷಿ. ಶಾಸಕರು ಕಟ್ಟಿದ ನಿಲ್ದಾಣವನ್ನು ಸಂಸದ ಒಡೆಯಲು ಹೊರಟಿದ್ದಾರೆ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

Leave a Reply

Your email address will not be published. Required fields are marked *

error: Content is protected !!