ಕರಾವಳಿ

ಬೆಳ್ತಂಗಡಿ: ಅಂಬೇಡ್ಕರ್‌ವಾದಿ ಪಿ. ಡೀಕಯ್ಯ ಸಾವು ಪ್ರಕರಣ: ಸಿಒಡಿ ತನಿಖೆಗೆ ಸರಕಾರ ಆದೇಶ

ಬೆಳ್ತಂಗಡಿ : ಸಮಾಜ ಪರಿವರ್ತನಾ ಚಳವಳಿಯ ನಾಯಕ, ಅಂಬೇಡ್ಕರ್‌ವಾದಿ ಪಿ. ಡೀಕಯ್ಯ ಅವರ ಸಾವಿನ ಬಗ್ಗೆ ಸಿಒಡಿ ತನಿಖೆಗೆ ರಾಜ್ಯ ಸರಕಾರ ಆದೇಶಿಸಿದೆ.

ಕಳೆದ ಜುಲೈ 6ರಂದು ಮನೆಯಲ್ಲಿ ಬೆಳ್ತಂಗಡಿ ತಾಲೂಕಿನ ಗರ್ಡಾಡಿಯ ತನ್ನ ಮನೆಯಲ್ಲಿ ಪಿ. ಡೀಕಯ್ಯ ಕುಸಿದು ಬಿದ್ದಿದ್ದರು. ತಲೆಗೆ ಗಾಯಗೊಂಡ ಸ್ಥಿತಿಯಲ್ಲಿದ್ದ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎರಡು ದಿನಗಳ ಬಳಿಕ ಅವರು ಮೃತಪಟ್ಟಿದ್ದರು. ಮನೆಯವರ ಒಪ್ಪಿಗೆಯಂತೆ ಅಂಗಾಂಗಗಳ ದಾನ ಮಾಡಿದ ಬಳಿಕ ಜು. 9ರಂದು ಬೌದ್ಧ ಧರ್ಮದ ಪ್ರಕಾರ ಕಣಿಯೂರು ಗ್ರಾಮದ ಪದ್ಮುಂಜ ಬಳಿಯ ಪೊಯ್ಯದ ಮೂಲ ಮನೆಗೆ ತಂದು ದಫನ ಮಾಡಲಾಗಿತ್ತು.

ಆದರೆ ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ, ಮೃತರ ತಾಯಿಯ ಕುಟುಂಬಸ್ಥರ ಪರವಾಗಿ ಡೀಕಯ್ಯ ಅವರ ಸಹೋದರಿಯ ಗಂಡ ಪದ್ಮನಾಭ ಎಂಬವರು ಜು.15 ರಂದು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು.ಹೀಗಾಗಿ ಜು. 18ರಂದು ತಹಶೀಲ್ದಾರ್‌ ಅವರ ನೇತೃತ್ವದಲ್ಲಿ ಶವವನ್ನು ಹೊರತೆಗೆದು ವೈದ್ಯರಿಂದ ಶವ ಪರೀಕ್ಷೆ ಮಾಡಲಾಗಿತ್ತು.

ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಸಿದ ಬೆಳ್ತಂಗಡಿ ಪೋಲಿಸರು ಮನೆಯವರ ದೂರಿನ ಆಧಾರದಲ್ಲಿ ತನಿಖೆ ನಡೆಸಿ ಹಲವರನ್ನು ತನಿಖೆಗೆ ಒಳಪಡಿಸಿದರು. ಈ ಮಧ್ಯೆ ಡೀಕಯ್ಯ ಅವರ ಕುಟುಂಬಸ್ಥರು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಪ್ರಕರಣದ ಬಗ್ಗೆ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಸಿಒಡಿ ತನಿಖೆಗೆ ಒತ್ತಾಯಿಸಿದ್ದರು. ಇದೀಗ ನ. 4ರಂದು ಘಟನೆಯ ಬಗ್ಗೆ ರಾಜ್ಯ ಸರಕಾರ ಸಿಒಡಿ ತನಿಖೆಗೆ ಆದೇಶಿಸಿದೆ. ಬೆಳ್ತಂಗಡಿ ಪೊಲೀಸ್‌ ಠಾಣೆಯಿಂದ ಪ್ರಕರಣದ ದಾಖಲೆಗಳನ್ನು ಸಿಒಡಿ ಇಲಾಖೆಗೆ ಒಪ್ಪಿಸುವಂತೆ ಆದೇಶಿಸಿದೆ.

Leave a Reply

Your email address will not be published. Required fields are marked *

error: Content is protected !!