ಉಪ್ಪಿನಂಗಡಿ: ವಿದ್ಯಾರ್ಥಿ ಆತ್ಮಹತ್ಯೆ
ಉಪ್ಪಿನಂಗಡಿ: ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಪ್ಪಿನಂಗಡಿ ಸಮೀಪದಿಂದ ವರದಿಯಾಗಿದೆ. ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಮನೆ ನಿವಾಸಿ ನಂದನ್ (13ವ) ಎಂಬಾತ ಮನೆಯ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ಸಂಜೆ ನಡೆದಿದೆ.

ಪಂಜದ ದಿ. ರೋಹಿತ್ ಗೌಡ ಎಂಬವರ ಮಗನಾದ ನಂದನ್ ತನ್ನ ತಂದೆಯ ನಿಧನದ ನಂತರ ದುಗಲಾಡಿಯ ತನ್ನ ಮಾವನ ಮನೆಯಲ್ಲಿದ್ದು, ಉಪ್ಪಿನಂಗಡಿಯ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದ., ನಂದನ್ ಏಳನೇ ತರಗತಿ ಉತ್ತೀರ್ಣನಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿಗೆ ತೇರ್ಗಡೆಹೊಂದಿದ್ದರು.
ಶುಕ್ರವಾರದಂದು ತನ್ನ ಗೆಳೆಯರೊಂದಿಗೆ ಆಟವಾಡುತ್ತಿದ್ದ ನಂದನ್ ತನ್ನ ಕೆಟ್ಟು ಹೋಗಿದ್ದ ಸೈಕಲ್ ಅನ್ನು ರಿಪೇರಿ ಮಾಡಿಕೊಡಬೇಕೆಂದು ಮನೆಯಲ್ಲಿ ಒತ್ತಾಯಿಸಿದ್ದ ಎನ್ನಲಾಗಿದೆ. ನಾಳೆ ಸೈಕಲ್ ರಿಪೇರಿ ಮಾಡಿಕೊಡಲಾಗುವುದೆಂದು ಮನೆಯವರು ತಿಳಿಸಿದ್ದರೆನ್ನಲಾಗಿದೆ. ಇದರಿಂದ ಮನನೊಂದ ಆತ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿಕೊಂಡು ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.