ಮಂಗಳೂರು: ವಿಷಾಹಾರ ಸೇವಿಸಿ ಒಂದೇ ಮನೆಯ ನಾಲ್ವರು ಅಸ್ವಸ್ಥ
ಮಂಗಳೂರು: ನಗರದ ಜೆಪ್ಪು ಬಪ್ಪಲ್ ಮನೆಯೊಂದರಲ್ಲಿ ವಿಷಾಹಾರ ಸೇವನೆಯಿಂದ ನಾಲ್ವರು ಅಸ್ವಸ್ಥರಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೆಪ್ಪು ಬಪ್ಪಲ್ ನಿವಾಸಿ ಅರವಿಂದರಾವ್ (52), ಪ್ರಭಾವತಿ (45), ಸೌರಭ್ (20), ಪ್ರತೀಕ್ (18) ಅವರು ನಿನ್ನೆ ರಾತ್ರಿ ಹೆಸರು ಬೇಳೆ ಹಾಗೂ ಐಸ್ ಕ್ರಿಮ್ ತಿಂದು ಮಲಗಿದ್ದರು. ಆದರೆ ಇಂದು ಬೆಳಿಗ್ಗೆ ಯಾರು ಕೂಡ ಮನೆಯ ಬಾಗಿಲ ತೆಗೆಯದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಮನೆಯ ಬಾಗಿಲು ತೆಗೆದು ನೋಡಿದಾಗ ಸ್ಥಳದಲ್ಲಿ ವಾಂತಿ ಮಾಡಿಕೊಂಡು,ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದರು. ಮೊದಲಿಗೆ ಅವರು ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಶಂಕಿಸಲಾಗಿತ್ತು. ತಕ್ಷಣ ಅವರೆಲ್ಲರನ್ನೂ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದಾಗ, ಅದು ಆತ್ಮಹತ್ಯೆಯಲ್ಲ, ವಿಷಾಹಾರ ಸೇವನೆಯಿಂದ ಇದು ಸಂಭವಿಸಿದೆ ಎಂದು ತಿಳಿದು ಬಂದಿದೆ.