ವ್ಯಾಪಾರಿಗಳ ಮೇಲೆ ಕಾಣಿಯೂರಿನಲ್ಲಿ ಗುಂಪು ಹಲ್ಲೆ ಪ್ರಕರಣ: ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು- ಕಾಂಗ್ರೆಸ್ ಮುಖಂಡ ಹಾರಿಸ್ ಬೈಕಂಪಾಡಿ ಆಗ್ರಹ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರಿನಲ್ಲಿ ಮುಸ್ಲಿಂ ವ್ಯಾಪಾರಿಗಳಾದ ಮಂಗಳೂರಿನ ಅಡ್ಡೂರಿನ ರಫೀಕ್ ಮತ್ತು ರಮೀಝುದ್ದೀನ್ ಎಂಬವರ ಮೇಲೆ ಮೇಲೆ ನಡೆದ ಕೊಲೆಯತ್ನ ಪ್ರಕರಣದ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಹಾರಿಸ್ ಬೈಕಂಪಾಡಿ ಒತ್ತಾಯಿಸಿದ್ದಾರೆ.
ರಫೀಕ್ ಮತ್ತು ರಮೀಝು ದ್ದೀನ್ ಅನ್ನುವ ಜವಳಿ ವ್ಯಾಪಾರಿಗಳು ಕಳೆದ ಹಲವಾರು ವರುಷಗಳಿಂದ ಜಿಲ್ಲೆಯ ನಾನಾ ಕಡೆ ಮನೆ ಮನೆ ತೆರಳಿ ಬೆಡ್ ಶೀಟ್ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಅವರು ಕಾಣಿಯೂರು ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿದ್ದ ವೇಳೆ ಮುಸಲ್ಮಾನರು ಎಂಬ ಏಕೈಕ ಕಾರಣಕ್ಕೆ ಬಿಜೆಪಿ ಬೆಂಬಲಿತ ಸಂಘ ಪರಿವಾರದವರು ಎನ್ನಲಾದ ಹಲವರು ಅಕ್ರಮ ಕೂಟ ಸೇರಿಕೊಂಡು ಪೂರ್ವ ನಿಯೋಜಿತವಾಗಿ ಅವರ ಮೇಲೆ ಮುಗಿಬಿದ್ದು ರಾಡ್, ದೊಣ್ಣೆ ಇನ್ನಿತರ ಆಯುಧಗಳಿಂದ ಕೈಕಾಲು ಮುರಿಯುವಂತೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದಲ್ಲದೇ ಸತತ ಎರಡು ಗಂಟೆಗಳ ಕಾಲ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ
ಕಠಿಣ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ
ಮುಸಲ್ಮಾನರನ್ನು ಗುರಿಯಾಗಿಸಿ ಪದೇ ಪದೇ ಇಂತಹ ಕ್ಷುಲ್ಲಕ ವಿಚಾರಕ್ಕೆ ಸಂಬಂಧ ಪಟ್ಟಂತೆ ನಿರಂತರವಾಗಿ ನಡೆಯುವಂತಹ ದಾಳಿಗಳಿಂದ ಮುಸಲ್ಮಾನರು ಭಯಭೀತರಾಗಿದ್ದು ಅಲ್ಪ ಸಂಖ್ಯಾತ ಮುಸಲ್ಮಾನ ಸಮುದಾಯಕ್ಕೆ ರಕ್ಷಣೆ ಇಲ್ಲದಂತಾಗಿದ್ದು, ಜಿಲ್ಲೆಯ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಕಾಣಿಯೂರು ಘಟನೆ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.