ಗುಂಡ್ಲುಪೇಟೆ: ‘ನಮಗೆ ಅನ್ಯಾಯವಾಗಿದೆ’ ಎಂದು ಸಮಸ್ಯೆ ಹೇಳುತ್ತಿದ್ದ ಮಹಿಳೆಗೆ ಕಪಾಳಕ್ಕೆ ಹೊಡೆದ ಸಚಿವ ವಿ. ಸೋಮಣ್ಣ
ಚಾಮರಾಜನಗರ: ವಸತಿ ಮೂಲಸೌಕರ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯೊಬ್ಬರ ಕಪಾಳಕ್ಕೆ ಹೊಡೆದ(Slaps) ಘಟನೆ ಶನಿವಾರ ಸಂಜೆ ಗುಂಡ್ಲುಪೇಟೆ ತಾಲೂಕಿನ ಹಂಗಳದಲ್ಲಿ ನಡೆದಿರುವುದು ವರದಿಯಾಗಿದೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಂಗಳದಲ್ಲ ಶನಿವಾರ ಗ್ರಾಮೀಣ ಪ್ರದೇಶಗಳ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ “ಹಂಗಳ ಗ್ರಾಮ ಪಂಚಾಯತ್ ವತಿಯಿಂದ 173 ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಫಲಾನುಭವಿಗಳನ್ನು ಸರಿಯಾಗಿ ಆಯ್ಕೆ ಮಾಡಿಲ್ಲ. ನಿವೇಶನ ಇದ್ದವರಿಗೇ ಮತ್ತೆ ಕೊಡಲಾಗಿದೆ.
“ನಮಗೆ ಅನ್ಯಾಯವಾಗಿದೆ” ಎಂದು ಆರೋಪಿಸಿ ಕೆಲವು ಮಹಿಳೆಯರು ಸಚಿವರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ಸಂದರ್ಭ ಕೆಂಪಮ್ಮ ಎಂಬ ಮಹಿಳೆ ಸಚಿವರ ಬಳಿಗೆ ತೆರಳಿ ಸಮಸ್ಯೆ ಹೇಳಲು ಮುಂದಾದಾಗ ತಾಳ್ಮೆ ಕಳೆದುಕೊಂಡ ಸಚಿವರು ಮಹಿಳೆಯ ಕೆನ್ನೆಗೆ ಬಾರಿಸಿದ್ದಾರೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ