ಹೃದಯ ಬಡಿತ ವ್ಯತ್ಯಾಸವನ್ನು ಅಲರ್ಟ್ ಮಾಡಿದ ವಾಚ್
ನವದೆಹಲಿ: ಟೆಕ್ನಾಲಜಿ ತುಂಬಾ ಮುಂದುವರೆದಿದ್ದು, ದಿನ ನಿತ್ಯದ ಜಂಜಾಟದಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆತಿರುವುದನ್ನು ಜಾಗ್ರತ ಗೊಳಿಸಲು, ನಮ್ಮ ಹೃದಯ ಬಡಿತ, ನಾವು ನಿತ್ಯ ಎಷ್ಟು ನಡೆದಿದ್ದೇವೆ ಎನ್ನುವುದನ್ನು ತೋರಿಸುವ ಕೆಲಸ ಸ್ಮಾರ್ಟ್ ವಾಚ್ ಗಳು ಮಾಡುತ್ತಿವೆ. ಕೆಲ ದಿನಗಳ ಹಿಂದೆ ಆ್ಯಪಲ್ ವಾಚ್ ವೊಂದರಿಂದಾಗಿ ಮಹಿಳೆ ಗರ್ಭಿಣಿ ಆಗಿರುವುದು ತಿಳಿದು ಬಂದಿತ್ತು. ಈಗ ಆ್ಯಪಲ್ ವಾಚ್ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ.
ಇಮಾನಿ ಮೈಲ್ಸ್ ಎನ್ನುವ 12 ವರ್ಷದ ಬಾಲಕಿಯೊಬ್ಬಳಿಗೆ ಆ್ಯಪಲ್ ವಾಚ್ ನಿಂದ ದೊಡ್ಡ ಉಪಕಾರವಾಗಿದೆ. ಇಮಾನಿ ಮೈಲ್ಸ್ ಗೆ ತನ್ನ ಆ್ಯಪಲ್ ವಾಚ್ ಹೃದಯಬಡಿತ ಜೋರಾಗಿ ಏರಿಕೆ ಆಗುವುದನ್ನು ನೋಟಿಫಿಕೇಷನ್ ಮೂಲಕ ಆಲರ್ಟ್ ಮಾಡಿದೆ. ಪದೇ ಪದೇ ತನ್ನ ವಾಚ್ ಈ ರೀತಿ ಆಲರ್ಟ್ ಮಾಡಿ ಹೇಳುತ್ತಿರುವುದಕ್ಕೆ ಇಮಾನಿ ಮೈಲ್ಸ್ ನ ತಾಯಿಗೆ ಚಿಂತೆಗೀಡಾಗುವಂತೆ ಮಾಡಿದೆ.
ಇಮಾನಿ ಮೈಲ್ಸ್ ನ ತಾಯಿ ಜೆಸ್ಸಿಕಾ ಕಿಚನ್ ಗೆ ಈ ರೀತಿ ಮಗಳಿಗೆ ಎಂದೂ ಆಗಿಲ್ಲವೆಂದು ಹೆದರಿ ಕೂಡಲೇ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಆಸ್ಪತ್ರೆಯಲ್ಲಿ ಇಮಾನಿ ಮೈಲ್ಸ್ ಗೆ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ( ಕ್ಯಾನ್ಸರ್) ಇದೆ ಎಂದು ವೈದ್ಯರು ತಿಳಿಸುತ್ತಾರೆ. ಇದು ಮಕ್ಕಳಲ್ಲಿ ಅಪರೂಪವಾಗಿ ಕಂಡು ಬರುತ್ತದೆ. ಈ ಕ್ಯಾನ್ಸರ್ ಗೆಡ್ಡೆ ದೇಹದ ಇತರ ಭಾಗಕ್ಕೆ ಹರಡುವ ಸಾಧ್ಯತೆಯಿರುವುದರಿಂದ ಇಮಾನಿ ಮೈಲ್ಸ್ ರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸುತ್ತಾರೆ.ಸಕಾಲಿಕ ಶಸ್ತ್ರಚಿಕಿತ್ಸೆಯ ಬಳಿಕ ಎಲ್ಲವೂ ಸರಿಯಾಗಿದೆ.
ವಾಚ್ ಇಲ್ಲದಿದೇ ಹೋಗಿದ್ದರೆ ಮಗಳನ್ನು ನಾನು ತಡವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೆ. ಆಗ ಸ್ಥಿತಿ ತುಂಬಾ ಕೆಟ್ಟದಾಗಿರುತ್ತಿತ್ತು ಎಂದು ಜೆಸ್ಸಿಕಾ ಕಿಚನ್ ಹೇಳುತ್ತಾರೆ.
ಇಸಿಜಿ, ಹೃದಯ ಬಡಿತ, ಆಕ್ಸಿಮೀಟರ್, ಋತುಚಕ್ರದ ಟ್ರ್ಯಾಕಿಂಗ್ ನ್ನು ಆ್ಯಪಲ್ ವಾಚ್ ಮಾಡುವ ಮೂಲಕ ಆರೋಗ್ಯ ರಕ್ಷಣೆಯ ಪ್ರಮುಖ ಕೆಲಸ ಮಾಡುತ್ತದೆ.