ಕ್ರೈಂರಾಷ್ಟ್ರೀಯ

ಸಹೋದರಿಗೆ ಎಸೆದ ಚೀಟಿಯನ್ನು ತನಗೆ ಎಸೆದ ಲವ್ ಲೆಟರ್ ಎಂದು ಭಾವಿಸಿದ ವಿದ್ಯಾರ್ಥಿನಿ: ಬಾಲಕನ ಭೀಕರ ಕೊಲೆ

ಪಾಟ್ನಾ: ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆಗೆ ಹಾಜರಾಗಿದ್ದ ತನ್ನ ಸಹೋದರಿಗೆ ಸಹಾಯ ಮಾಡಲೆಂದು ಕೇಂದ್ರದ ಹೊರಗಿನಿಂದ ಬಾಲಕನೊಬ್ಬ ಎಸೆದ ಚೀಟಿಯೊಂದು ತಪ್ಪಿ ಇನ್ನೊಬ್ಬ ಹುಡುಗಿಯ ಬಳಿ ಬಿದ್ದ ನಂತರ ಅದು ಪ್ರೇಮ ಪತ್ರ ಎಂದು ತಪ್ಪಾಗಿ ತಿಳಿದ ಆಕೆ ತನ್ನ ಸಹೋದರರಲ್ಲಿ ದೂರಿದ ಬೆನ್ನಿಗೇ ಆ ಹುಡುಗನನ್ನು ಕೊಚ್ಚಿ ಹತ್ಯೆಗೈದಿರುವ ಆಘಾತಕಾರಿ ಘಟನೆ ಬಿಹಾರದ ಭೋಜಪುರ್ ಎಂಬಲ್ಲಿಂದ ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಬಾಲಕನ ಮೃತದೇಹದ ಚೂರುಗಳು ಸೋಮವಾರ ಮಹತ್‍ಬನಿಯಾ ಹಾಲ್ಟ್ ನಿಲ್ದಾಣದ ಸಮೀಪದ ಹಳಿಯಲ್ಲಿ ಹರಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಸಂಬಂಧ ಬಾಲಕಿಯ ಸಹೋದರ ಹಾಗೂ ಆತನ ಸ್ನೇಹಿತರನ್ನು ಬಂಧಿಸಲಾಗಿದ್ದು ತನಿಖೆ ಮುಂದುವರಿದಿದೆ. ಬಾಲಕನ ಕೈಕಾಲುಗಳನ್ನು ಕಡಿಯಲಾಗಿರುವ ಈ ಘಟನೆ ಆತನ ಕುಟುಂಬ ಸಹಿತ ಇಡೀ ಗ್ರಾಮದ ಜನರಲ್ಲಿ ಆಘಾತ ಸೃಷ್ಟಿಸಿದೆ ಎಂದು ವರದಿಯಾಗಿದೆ.

ಕಳೆದ  ವಾರ ಐದನೇ ತರಗತಿಯ ಬಾಲಕ ಆರನೇ ತರಗತಿಯಲ್ಲಿ ಕಲಿಯುತ್ತಿರುವ ತನ್ನ ಸೋದರಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದಿದ್ದ. ಅರ್ಧ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದ ವೇಳೆ ತನ್ನ ಸಹೋದರಿಗೆ ಸಹಾಯ ಮಾಡಲೆಂದು ಆತ ಉತ್ತರದ ಚೀಟಿಯೊಂದನ್ನು ಒಳಗೆ ಎಸೆದಿದ್ದ. ಆದರೆ ಈ ಚೀಟಿ ಇನ್ನೊಬ್ಬ ಬಾಲಕಿಯ ಹತ್ತಿರ ಬಿದ್ದಿತ್ತು. ಇದು ಪ್ರೇಮಪತ್ರ ಎಂದು ತಪ್ಪಾಗಿ ತಿಳಿದ ಆಕೆ ಮನೆಗೆ ಮರಳಿದ ನಂತರ ತನ್ನ ಸಹೋದರರಿಗೆ ತಿಳಿಸಿದ್ದರು. ಆಕೆಯ ಸಹೋದರರು ಮತ್ತು ಅವರ ಸ್ನೇಹಿತರು ಜೊತೆಗೂಡಿ ಚೀಟಿ ಎಸೆದಿದ್ದ ಬಾಲಕನಿಗೆ ಥಳಿಸಿ ಸಾಯಿಸಿದ್ದರು.

ಮನೆಗೆ ಮರಳಿದ ಬಾಲಕಿ ಮಾಹಿತಿ ನೀಡಿದ ನಂತರ ಕುಟುಂಬ ಬಾಲಕನಿಗಾಗಿ ಹುಡುಕಾಟ ಆರಂಭಿಸಿ ಪೊಲೀಸರಿಗೂ ಮಾಹಿತಿ ನೀಡಿದ್ದರು.

ಸೋಮವಾರ ಗ್ರಾಮದ ದೇವಸ್ಥಾನದ ಸಮೀಪ ತುಂಡಾಗಿ ಬಿದ್ದಿದ್ದ ಕೈಯ್ಯೊಂದನ್ನು ಗಮನಿಸಿದ ಗ್ರಾಮಸ್ಥರೊಬ್ಬರು ಪೊಲಿಸರಿಗೆ ಮಾಹಿತಿ ನೀಡಿದ್ದರು. ನಂತರ ಮೃತದೇಹದ ಚೂರುಗಳು ಹಳಿಯಲ್ಲಿ ಪತ್ತೆಯಾಗಿದ್ದವು.

ಆರೋಪಿಗಳೆಲ್ಲರೂ ಅಪ್ರಾಪ್ತರಾಗಿರುವುದರಿಂದ ಅವರನ್ನು ಬಾಲಾಪರಾಧಿಗಳ ಕೇಂದ್ರದಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!