ಕರಾವಳಿಕ್ರೈಂ

ಅಕ್ರಮ ಜಾನುವಾರು ಸಾಗಾಟ:  ನಾಲ್ವರ ವಿರುದ್ಧ ಪ್ರಕರಣ ದಾಖಲು



ಬಂಟ್ವಾಳ: ತಾಲೂಕಿನ ಕನ್ಯಾನ ಗ್ರಾಮದ ಪಾದೆಕಲ್ಲು ಎಂಬಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಬೊಲೆರೋ ಪಿಕಪ್ ವಾಹನದಲ್ಲಿ ಜಾನುವಾರನ್ನು ಸಾಗಿಸುತ್ತಿದ್ದ ಇಬ್ಬರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.



ನ.10ರಂದು ರಾತ್ರಿ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಗಳು ಪಾದೆಕಲ್ಲು ಎಂಬಲ್ಲಿ ರಾತ್ರಿ ಚೆಕ್‌ಪಾಯಿಂಟ್ ಕರ್ತವ್ಯದಲ್ಲಿದ್ದ ವೇಳೆ, ಬೊಲೆರೋ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ಒಂದು ಜಾನುವಾರು ಪತ್ತೆಯಾಗಿದೆ.


ವಾಹನದಲ್ಲಿದ್ದ ಬಂಟ್ವಾಳ ತಾಲೂಕಿನ ಕರೋಪಾಡಿ ನಿವಾಸಿಗಳಾದ ಒ.ಪಿ. ಅಬ್ದುಲ್ಲಾ (45) ಹಾಗೂ ಸುಬ್ರಹ್ಮಣ್ಯ (55) ಅವರನ್ನು ವಿಚಾರಿಸಿದಾಗ, ಯಾವುದೇ ಪರವಾನಿಗೆ ಇಲ್ಲದೆ ಜಾನುವಾರನ್ನು ಕಳ್ಳತನದಿಂದ ಸಾಗಿಸುತ್ತಿರುವುದು ತಿಳಿದುಬಂದಿದೆ. ಅಲ್ಲದೆ, ಕಾರಿನಲ್ಲಿ ಸ್ಥಳಕ್ಕೆ ಬಂದಿದ್ದ ಉಷಾ ಎಸ್. ಶೆಟ್ಟಿ ಹಾಗೂ ಗುರುತೇಜ ಎಂಬವರ ಸೂಚನೆಯಂತೆ ಜಾನುವಾರನ್ನು ಸಾಗಿಸುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ ಎನ್ನಲಾಗಿದೆ.


ಪೊಲೀಸರು ಜಾನುವಾರು ಸಹಿತ ಪಿಕಪ್ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದು, ಒ.ಪಿ. ಅಬ್ದುಲ್ಲಾ, ಸುಬ್ರಹ್ಮಣ್ಯ, ಉಷಾ ಎಸ್. ಶೆಟ್ಟಿ ಹಾಗೂ ಗುರುತೇಜ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 233/2026, ಕಲಂ 303(2) ಬಿಎನ್‌ಎಸ್ 2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!