ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಮೇಲೆ ಮೊಸಳೆ ದಾಳಿ, ಗಾಯ, ಪೊಲೀಸರಿಂದ ರಕ್ಷಣೆ
ಸುಬ್ರಹ್ಮಣ್ಯ: ವೈಯಕ್ತಿಕ ಕಾರಣಗಳಿಂದ ಮನನೊಂದ ಉಡುಪಿ ಮೂಲದ ಮಹಿಳೆಯೋರ್ವರು ಸುಬ್ರಹ್ಮಣ್ಯದ ಕುಮಾರಧಾರಾ ಸೇತುವೆ ಬಳಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನ.4ರ ರಾತ್ರಿ ನಡೆದಿದೆ.
ಈ ವೇಳೆ ನದಿಯಲ್ಲಿದ್ದ ಮೊಸಳೆಯೊಂದು ಮಹಿಳೆಗೆ ಕಚ್ಚಿದ್ದು, ಸಣ್ಣ ಪ್ರಮಾಣದ ಗಾಯಗಳಾಗಿವೆ. ಮಹಿಳೆಯ ಬೊಬ್ಬೆ ಕೇಳಿದ ಸಮೀಪದ ಲಾಡ್ಜ್ನ ಸಿಬ್ಬಂದಿ ತಕ್ಷಣ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ಸಹಕಾರದೊಂದಿಗೆ ಮಹಿಳೆಯನ್ನು ರಕ್ಷಿಸಿದ್ದಾರೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಮನೆಯವರೊಂದಿಗೆ ಕಳುಹಿಸಿಕೊಡಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.



