ಕಾನೂನುಬದ್ಧ ಮಾಂಸ ಸಾಗಾಟ ತಡೆದರೆ 10 ವರ್ಷ ಜೈಲು ಶಿಕ್ಷೆ:
ಸುಧೀರ್ ಕುಮಾರ್ ರೆಡ್ಡಿ
ಮಂಗಳೂರು: ಗೋಹತ್ಯೆ ಹಾಗೂ ಕಾನೂನುಬಾಹಿರ ಜಾನುವಾರು ಸಾಗಾಟವನ್ನು ತಡೆಯಲು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರೆ ಸಾಕು, ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಪ್ರಕರಣದಲ್ಲಿ ಮಾಂಸವನ್ನು ಕೇರಳದಿಂದ ಖರೀದಿಸಿ ತರಲಾಗಿತ್ತು. ಕರ್ನಾಟಕದಲ್ಲಿ ಗೋಹತ್ಯೆ ನಿಷೇಧವಿದ್ದರೂ, ನಿಯಮಗಳ ಪ್ರಕಾರ ಕಾನೂನುಬದ್ದ ಮಾಂಸ ಮಾರಾಟ ಮತ್ತು ಸಾಗಾಟಕ್ಕೆ ಇಲ್ಲಿ ಅವಕಾಶವಿದೆ. ಹೀಗಾಗಿ ವಾಹನವನ್ನು ತಡೆಯುವುದು, ದಾಳಿ ಮಾಡುವುದು ಅಥವಾ ಬೆದರಿಕೆ ಹಾಕುವುದು ಸೇರಿದಂತೆ ಯಾವುದೇ ಕಾನೂನುಬದ್ದ ಕೆಲಸವನ್ನು ತಡೆಯಲು ಯತ್ನಿಸುವುದು ಕೂಡ ಅಪರಾಧ ಎಸಗಿದಂತಾಗುತ್ತದೆ. ಇಂತಹ ಅಪರಾಧಕ್ಕೆ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದು ಎಂದು ಎಚ್ಚರಿಸಿದ್ದಾರೆ.
ಸೋಮವಾರ ಬೆಳಗ್ಗೆ ಮಾಂಸ ಸಾಗಾಟ ವಾಹನವನ್ನು ತಡೆಯಲು ಯತ್ನಿಸಲಾಗಿದೆ ಎಂಬ ದೂರು ಬಂದಿದೆ. ಇದು ನೈಜ ಎಂದು ಕಂಡುಬಂದರೆ, ಅವರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.


