ಮಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ಪತ್ತೆ: 7 ಮಂದಿ ವಶಕ್ಕೆ; 9 ಬೈಕ್ಗಳ ವಶ
ಮಂಗಳೂರು: ಮಂಗಳೂರು ನಗರದಲ್ಲಿ ನಡೆದ ದ್ವಿಚಕ್ರ ವಾಹನ ಕಳವು ಪ್ರಕರಣಗಳನ್ನು ಪತ್ತೆಹಚ್ಚಿರುವ ಪೊಲೀಸರು, ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಮೂವರು ಬಾಲಕರು ಸೇರಿದಂತೆ ಒಟ್ಟು ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಕಳವು ಮಾಡಲಾಗಿದ್ದ ಆರು ದ್ವಿಚಕ್ರ ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮೂರು ವಾಹನಗಳು ಸೇರಿದಂತೆ ಒಟ್ಟು ಒಂಬತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಅಂದಾಜು ಮೌಲ್ಯ 4.50 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೆಲೆನ್ಸಿಯಾ ಜಂಕ್ಷನ್ನ ಡಾನ್ ಬಾಸ್ಕೋ ಹಾಸ್ಟೆಲ್ ಬಳಿ ಅ.12ರಂದು ನಿಲ್ಲಿಸಿದ್ದ ಕೆಟಿಎಂ ಡ್ಯೂಕ್ ಬೈಕ್, ಜಪ್ಪು ಮಾರ್ಕೆಟ್ ಬಳಿ ಅ.19ರಂದು ನಿಲ್ಲಿಸಿದ್ದ ಯಮಹಾ ಎಫ್ಝಡ್ ಬೈಕ್, ಅತ್ತಾವರದ ಕೆಎಂಸಿ ಆಸ್ಪತ್ರೆ ಬಳಿಯ ದುರ್ಗಾ ಹೋಟೆಲ್ ಮುಂದೆ ಅ.21ರಂದು ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ಬೈಕ್ ಹಾಗೂ ಹೊಯ್ಗೆ ಬಜಾರ್ನ ಭಗವತಿ ಅಪಾರ್ಟ್ಮೆಂಟ್ ಕೆಳಗೆ ಅ.22ರಂದು ನಿಲ್ಲಿಸಿದ್ದ ಕೆಟಿಎಂ ಡ್ಯೂಕ್ ಬೈಕ್ ಕಳವಾಗಿದ್ದವು.
ಅದೇ ರೀತಿ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಬಳಿ ಅ.18ರಂದು ನಿಲ್ಲಿಸಿದ್ದ ರಾಯಲ್ ಎನ್ಫೀಲ್ಡ್ ಬುಲೆಟ್ ಹಾಗೂ ಕುತ್ತಾರ್ ಪಂಡಿತ್ ಹೌಸ್ ಬಳಿ ಅ.21ರಂದು ನಿಲ್ಲಿಸಿದ್ದ ಯಮಹಾ ಎಫ್ಝಡ್ ಬೈಕ್ ಕಳವಾಗಿದ್ದವು. ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ನಾಲ್ಕು ಹಾಗೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಹಾಗೂ ಅಪರಾಧ ಪತ್ತೆ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ತನಿಖೆ ಮತ್ತು ಮಾಹಿತಿ ಸಂಗ್ರಹದ ಮೂಲಕ ತಂಡವು ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ವಿಚಾರಣೆಯ ವೇಳೆ, ಇತರ ದುಷ್ಕೃತ್ಯಗಳಾದ ಸರಗಳ್ಳತನ ಮುಂತಾದ ಕೃತ್ಯಗಳ ಮೂಲಕ ಹಣ ಸಂಪಾದಿಸಿ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಲೆಬಾಳುವ ಬೈಕ್ಗಳನ್ನು ಗುರಿಯಾಗಿಸಿಕೊಂಡು, ನಿಲುಗಡೆ ಮಾಡಿದ್ದ ಸ್ಥಳಗಳಿಂದ ಕಳವು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದುದೂ ತನಿಖೆಯಿಂದ ತಿಳಿದುಬಂದಿದೆ.
ವಶಕ್ಕೆ ಪಡೆದ ಏಳು ಮಂದಿಯಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಅವರಲ್ಲಿ ಮೂವರು ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕರಾಗಿದ್ದಾರೆ. ಬಂಧಿತ ನಾಲ್ವರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಘವೇಂದ್ರ ಬೈಂದೂರು ಅವರ ನೇತೃತ್ವದಲ್ಲಿ ಪಿಎಸ್ಐ ಮಾರುತಿ ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಪುಟ್ಟರಾಮ್, ಸಾಗರ ದೇವಕತ್ತಿ ಮತ್ತು ಆಂಜನೇಯ ಕೆ.ಎಸ್. ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಠಾಣೆಯ ಇತರ ಅಧಿಕಾರಿ ಮತ್ತು ಸಿಬ್ಬಂದಿಯವರು ಸಹಕರಿಸಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.

