ಮಂಗಳೂರಿನಲ್ಲಿ ಸುಲಿಗೆ ಆರೋಪ ಪ್ರಕರಣ: ಓರ್ವ ಆರೋಪಿ ಬಂಧನ
ಮಂಗಳೂರು: ಕೊಲೆಯಂತಹ ಗಂಭೀರ ಆರೋಪ ಹೊರಿಸಿ ಹಣ ಹಾಗೂ ಆಸ್ತಿಯನ್ನು ಸುಲಿಗೆ ಮಾಡಲು ಸಂಚು ರೂಪಿಸಿ, ಸಾರ್ವಜನಿಕವಾಗಿ ಕುಟುಂಬದ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ನೀಡಲಾದ ದೂರಿನ ಸಂಬಂಧ ಉರ್ವಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀಮತಿ ಮಾಯ ಅನ್ನಾಮೇರಿ ರೇಗೋ ಅವರು ನೀಡಿದ ದೂರಿನ ಮೇರೆಗೆ ದಿನಾಂಕ 10-08-2026 ರಂದು ಉರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 83/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 61(a)(1) ಹಾಗೂ 308(7) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅ.23ರಂದು ಮಂಗಳೂರಿನ ಶಕ್ತಿನಗರದ ಪದವು, ಗಾನಮಜಲ್ ನಿವಾಸಿ ಜೋಸೆಫ್ ಥೋರೆಸ್ಸ್ ಅವರ ಪುತ್ರ ನವೀನ್ ಥೋರೆಸ್ಸ್ (42) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅ.24ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದಲ್ಲಿ ಇತರ ಆರೋಪಿಗಳು ಭಾಗಿಯಾಗಿರುವ ಬಗ್ಗೆ ತನಿಖೆ ಮುಂದುವರಿದಿದ್ದು, ಕೂಲಂಕುಷ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

