ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಲೋಕಸಭೆ ವಿಪಕ್ಷ ನಾಯಕರಿಂದ ಚುನಾವಣಾ ಆಯೋಗದ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಲು ಯತ್ನ, ಹಲವರು ವಶಕ್ಕೆ
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅ.6ರಂದು ಚುನಾವಣಾ ಆಯೋಗದ ಪ್ರಧಾನ ಕಚೇರಿಯನ್ನು ಮುತ್ತಿಗೆ ಹಾಕಲು ಯತ್ನಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ ‘ಇಂಡಿಯಾ’ ಒಕ್ಕೂಟದ ಪ್ರಮುಖ ಸಂಸದರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚುನಾವಣಾ ಆಯೋಗದ ಕೇಂದ್ರ ಕಚೇರಿಯತ್ತ ತೆರಳುತ್ತಿದ್ದ ಇಂಡಿಯಾ ಒಕ್ಕೂಟದ ಸಂಸದರನ್ನು ಸಂಸತ್ ರಸ್ತೆಯಲ್ಲಿ ಪೊಲೀಸರು ತಡೆದರು. ಬಳಿಕ ಸಂಸದರು ರಸ್ತೆಯಲ್ಲೇ ಧರಣಿ ಕುಳಿತು ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿದರು.
ಇದಕ್ಕೂ ಮುನ್ನ ಭದ್ರತಾ ಸಿಬ್ಬಂದಿ ಮೆರವಣಿಗೆಯನ್ನು ತಡೆದಾಗ ರಾಹುಲ್ ಗಾಂಧಿ ಮತ್ತು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಪೊಲೀಸ್ ಬ್ಯಾರಿಕೇಡ್ ಮೇಲೆ ಹತ್ತಿದ್ದರು ಎಂದು ತಿಳಿದು ಬಂದಿದೆ.
ಮೆರವಣಿಗೆ ಹಿನ್ನೆಲೆಯಲ್ಲಿ ಸಂಸತ್ ಭವನ ಮತ್ತು ಚುನಾವಣಾ ಆಯೋಗದ ಕಚೇರಿ ಸುತ್ತಮುತ್ತ ಭಾರಿ ಭದ್ರತೆ ಹಾಗೂ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು. ಸಂಸದರು ಆಗಮಿಸುವುದಕ್ಕೂ ಮುನ್ನವೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

