ಕರಾವಳಿ

ಪುತ್ತೂರು ಪ್ರೆಸ್ ಕ್ಲಬ್ ಬಳಿ ಗಲಾಟೆ, ಪ್ರಕರಣ ದಾಖಲು



ಪುತ್ತೂರು: ಪುತ್ತೂರು ಪ್ರೆಸ್ ಕ್ಲಬ್ ಬಳಿ ರಾಜಕೀಯ ಪಕ್ಷವೊಂದರ ಕಾರ್ಯಕರ್ತನಿಗೆ ತಳ್ಳಾಟ ನಡೆಸಿ, ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಪುತ್ತೂರು ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ ಅವರು ನೀಡಿದ ದೂರಿನಂತೆ, ತಮ್ಮ ವಿರುದ್ಧ ಮಾಡಲಾಗಿರುವ ಕೆಲವು ಆರೋಪಗಳಿಗೆ ಸ್ಪಷ್ಟನೆ ನೀಡುವ ಸಲುವಾಗಿ ಸೆ.1ರಂದು ಮಧ್ಯಾಹ್ನ ಪುತ್ತೂರು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಲು ಆಗಮಿಸಿದ್ದರು.

ಈ ವೇಳೆ ಉದಯ ಪಾಟಾಳಿ, ಜುನೈದ್ ಬಿಜಿ, ಇಸಾಕ್ ಸಾಲ್ಮರ, ಬಶೀರ್ ಪರ್ಲಡ್ಕ, ಹಕೀಂ ಬೋಲ್ವಾರು, ಮೋನು ಬಪ್ಪಳಿಗೆ, ನಾಶಿರ್ ಕೊಲ್ಪೆ, ಪ್ರವೀಣ್ ಆಚಾರ್ಯ ಸೇರಿದಂತೆ ಇತರರು ಸೇರಿಕೊಂಡು ತಮ್ಮನ್ನು ತಳ್ಳಾಡಿ, ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಳಿಕ ತಾವು ಪ್ರೆಸ್ ಕ್ಲಬ್ ಒಳಗೆ ತೆರಳಿದಾಗ, ಹೊರಗೆ ಬರದಂತೆ ಆರೋಪಿಗಳು ಅಕ್ರಮವಾಗಿ ತಡೆದಿದ್ದಾರೆ ಎಂದು ಅಬ್ದುಲ್ ಹಕೀಂ ದೂರಿನಲ್ಲಿ ತಿಳಿಸಿದ್ದಾರೆ. ತಳ್ಳಾಟದಿಂದ ನೋವು ಉಂಟಾದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.



ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 105/2026ರಂತೆ ಕಲಂ 127(2), 351(1), 351(2), 351(3), 352, 115 r/w 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!