ಉಪ್ಪಿನಂಗಡಿ: ಗಲಾಟೆ, ಸಾರ್ವಜನಿಕವಾಗಿ ತಲವಾರು ಪ್ರದರ್ಶಿಸಿ ಭೀತಿ ಸೃಷ್ಟಿ; ಇಬ್ಬರು ವಶಕ್ಕೆ
ಉಪ್ಪಿನಂಗಡಿ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶೆಣೈ ರಸ್ತೆಯಲ್ಲಿರುವ ಬಾರ್ ಸಮೀಪ ಅ.18ರಂದು ರಾತ್ರಿ ಮಾತಿನ ಚಕಮಕಿ ಗಲಾಟೆಗೆ ತಿರುಗಿದ್ದು, ಈ ವೇಳೆ ವ್ಯಕ್ತಿಯೊಬ್ಬರು ತಲವಾರು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಭೀತಿ ಉಂಟುಮಾಡಿದ ಘಟನೆ ನಡೆದಿದೆ.

ಮಂಜುನಾಥ್, ವಿಶ್ವನಾಥ ಹಾಗೂ ಮತ್ತೋರ್ವ ವ್ಯಕ್ತಿಯ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಸಂಭವಿಸಿದೆ. ಈ ವೇಳೆ ಮಂಜುನಾಥ್ ಎಂಬಾತ ತನ್ನ ಬಳಿಯಿದ್ದ ತಲವಾರನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಭೀತಿ ಮೂಡಿಸಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ಮಂಜುನಾಥ್ ಹಾಗೂ ವಿಶ್ವನಾಥ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

