ಎಸ್.ಡಿ.ಪಿ.ಐ ಕಾರ್ಯಕರ್ತರ ಸಮಾವೇಶ
ಪುತ್ತೂರು: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪಕ್ಷದ ಕಾರ್ಯಕರ್ತರ ಸಮಾವೇಶವು ಪಡೀಲಿನ ಟ್ರಿನಿಟಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಅಶ್ರಫ್ ಬಾವುರವರು ಮುಂಬರುವ ಗ್ರಾಮ ಪಂಚಾಯತ್ ತಾಲೂಕು/ಜಿಲ್ಲಾ ಪಂಚಾಯತ್ ಮತ್ತು ನಗರಸಭೆ ಚುನಾವಣೆಗಳಿಗೆ ಸಜ್ಜಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್.ಡಿ.ಪಿ.ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮೊಹಮ್ಮದ್ ತುಂಬೆ ಮಾತನಾಡಿ ರಾಷ್ಟ್ರೀಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದು ಕಳೆದ ಚುನಾವಣೆಗಳಲ್ಲಿ ಡಿಎಂಕೆ, ಟಿಎಂಸಿ ಮುಂತಾದ ಪಕ್ಷಗಳು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ, ಬಿಜೆಪಿಯು ರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಪಕ್ಷಗಳನ್ನು ಇಲ್ಲದಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದೆ, ರಾಜ್ಯದಲ್ಲಿ ನಡೆದ ಸಚಿವ ಸಂಪುಟ ಪುನರ್ರಚನೆಯಲ್ಲಿ ಕೇವಲ ಒಬ್ಬ ಮುಸಲ್ಮಾನರಿಗೆ ಸಚಿವ ಸ್ಥಾನ ನೀಡಲಾಗಿದೆ, 9 ಶೇಕಡ ಇರುವ ಲಿಂಗಾಯುತರಿಗೆ ಮೂರು ಸ್ಥಾನ, ಒಕ್ಕಲಿಗರಿಗೆ ಮೂರು ಸ್ಥಾನ, ಎರಡು ಶೇಕಡ ಇರುವ ಕ್ರಿಶ್ಚಿಯನ್ ಸಮುದಾಯಕ್ಕೆ ಒಂದು ಸ್ಥಾನ ನೀಡಿ, 14 ಶೇಕಡ ಇರುವ ಮುಸ್ಲಿಮರಿಗೆ ಕೇವಲ ಒಂದು ಸಚಿವ ಸ್ಥಾನ ನೀಡಿರುವುದು ಮುಸಲ್ಮಾನರಿಗೆ ಮಾಡಿದ ಸಾಮಾಜಿಕ ಹಾಗೂ ರಾಜಕೀಯ ಅನ್ಯಾಯವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಂಘ ಪರಿವಾರದ ಮನಸ್ಥಿತಿಯವರೇ ತುಂಬಿಕೊಂಡಿದ್ದು ಮುಸ್ಲಿಮರಿಗೆ ನಿರಂತರ ದ್ರೋಹ ಬಗೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ಎಂದು ಹೇಳಿದರು.
ಎಸ್.ಡಿ.ಪಿ.ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ರವರು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಪಕ್ಷವು ಕ್ಯಾಡರ್ ಆಧಾರಿತ ಪಕ್ಷವಾಗಿದ್ದು ಮತ್ತು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷವಾಗಿದೆ. ಪಕ್ಷವು ಶಿಸ್ತಿಗೆ ಅತ್ಯಂತ ಪ್ರಾಮುಖ್ಯತೆ ನೀಡಿದ್ದು ಕಾರ್ಯಕರ್ತರನ್ನು ರಾಜಕೀಯವಾಗಿ ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನ ಆಯೋಜಿಸುತ್ತಿವೆ, ಪಕ್ಷದ ಮುಂಬರುವ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಕಾರ್ಯಕರ್ತರು ಉತ್ಸಾಹದೊಂದಿಗೆ ಪಾಲ್ಗೊಳ್ಳಬೇಕೆಂದು ಹೇಳಿದರು.
ರಾಜ್ಯ ಸಮಿತಿ ಸದಸ್ಯರಾದ ಅಡ್ವೋಕೇಟ್ ಅಶ್ರಫ್ ಅಗ್ನಾಡಿ ಮಾತನಾಡಿ ರಾಜ್ಯ ಸರಕಾರವು ಗ್ಯಾರಂಟಿಯ ಹೆಸರಿನಲ್ಲಿ ಜನತೆಗೆ ನಿಜವಾಗಿ ನೀಡಬೇಕಾದಂತಹ ಹಕ್ಕುಗಳನ್ನು ಕಸಿಯುತ್ತಿದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಹೇಳಿದಂತಹ 2ಬಿ ಮೀಸಲಾತಿ ಮರುಜಾರಿ, ಗೋ ಹತ್ಯೆ ನಿಷೇಧ, ಹಾಗೂ ಮತಾಂತರ ನಿಷೇಧ ಹಿಂಪಡೆತ ಮುಂತಾದ ಭರವಸೆಗಳನ್ನು ಈಡೇರಿಸಲೇ ಇಲ್ಲ, ಸಾಮಾಜಿಕ ನ್ಯಾಯದ ಮುಖವಾಡ ಧರಿಸಿ ಸಿದ್ದರಾಮಯ್ಯನವರು ಅದಕ್ಕೆ ವಿರುದ್ಧವಾಗಿ ನಡೆದುಕೊಂಡರು. ಬಿಜೆಪಿ ಪಕ್ಷಕ್ಕೆ ಹೆದರಿ ಅವರ ಅಜಂಡಾಗಳನ್ನೇ ನಾಚಿಸುವ ರೀತಿಯಲ್ಲಿ ಅಧಿಕಾರ ನಡೆಸಿದರು. ಮುಸ್ಲಿಮರಿಗೆ ಸಿಗಬೇಕಾದಂತಹ ಅವಕಾಶಗಳನ್ನು ನಿರಾಕರಿಸುವ ಮೂಲಕ ಮುಸ್ಲಿಮರಿಗೆ ದ್ರೋಹ ಎಸಗಿದರು ಎಂದರು.
ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯರಾದ ಅಡ್ವೋಕೇಟ್ ಮಜೀದ್ ಖಾನ್ ಸಮಾರೋಪ ಮಾತುಗಳನ್ನಾಡಿದರು. ಪುತ್ತೂರು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಉಸ್ಮಾನ್ ಎ.ಕೆ ಧನ್ಯವಾದಗೈದರು. ಪುತ್ತೂರು ಕ್ಷೇತ್ರ ಜೊತೆ ಕಾರ್ಯದರ್ಶಿ ರಹೀಮ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು, ಕಾರ್ಯದರ್ಶಿ ಶಾಕಿರ್ ಅಳಕೆಮಜಲು , ಪುತ್ತೂರು ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ಸುಲೈಮಾನ್ ಬಿ ಕೆ, ಕಾರ್ಯದರ್ಶಿ ಇಸ್ಮಾಯಿಲ್ ಕೆಮ್ಮಾಯಿ, ಕೋಶಾಧಿಕಾರಿ ಸದ್ದಾಂ ಮುರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಎಸ್.ಡಿ.ಪಿ.ಐ ಪುತ್ತೂರು ನಗರ ಸಮಿತಿಯ ಪದಾಧಿಕಾರಿಗಳ ಪದಗ್ರಹಣವು ನಡೆಯಿತು.





