ಮಂಗಳೂರು: ಆತ್ಮಹತ್ಯೆಗೆ ಮುಂದಾಗಿದ್ದ ರೈತನನ್ನು ರಕ್ಷಿಸಿದ ಪೊಲೀಸರು
ಮಂಗಳೂರು: ಕೂಳೂರು ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಹಾಸನ ಜಿಲ್ಲೆಯ ಕೃಷಿಕನನ್ನು ಪಣಂಬೂರು ಪೊಲೀಸರು ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ಹಳ್ಳಿಯೊಂದರ ಕೃಷಿಕ ಆರೋಗ್ಯ ಹಾಗೂ ಹಣಕಾಸಿನ ಸಮಸ್ಯೆಯಿಂದ ಮನನೊಂದು ಶುಕ್ರವಾರ ಬೆಳಗ್ಗೆ ಮನೆಯಿಂದ ಯಾರಿಗೂ ಹೇಳದೆ ಬಂದಿದ್ದರು. ಮೊಬೈಲ್‌ಫೋನ್ ಆನ್‌ಲ್ಲಿಟ್ಟುಕೊಂಡಿದ್ದ ಇವರಿಗೆ ಮನೆಯವರು ಕರೆಮಾಡಿ ಮನೆಗೆ ಬರುವಂತೆ ವಿನಂತಿಸಿಕೊಂಡರೂ ಅವರು ಇದ್ದ ಸ್ಥಳ ತಿಳಿಸದೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಕರೆ ಕಡಿತ ಮಾಡುತ್ತಿದ್ದರೆನ್ನಲಾಗಿದೆ.
ಇದರಿಂದ ಆತಂಕಕ್ಕೀಡಾದ ಮನೆಯವರು ಅವರ ಪರಿಚಯದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮೂಲಕ ಪಣಂಬೂರು ಪೊಲೀಸ್ ನಿರೀಕ್ಷಕ ಸಲೀಮ್ ಅಬ್ಬಾಸ್ ರನ್ನು ಸಂಪರ್ಕಿಸಿ ಸಂಜೆ 5:30ರ ಸುಮಾರಿಗೆ ಮಾಹಿತಿ ನೀಡಿದ್ದರು. ಪೊಲೀಸ್ ನಿರೀಕ್ಷಕರು ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಕಾರ್ಯಾಚರಣೆ ಆರಂಭಿಸಿದರು.
ಪೊಲೀಸ್ ಆಯುಕ್ತರ ಕಚೇರಿಗೆ ಮಾಹಿತಿ ರವಾನಿಸಿ ಆತ್ಮಹತ್ಯೆಗೆ ಯತ್ನಿಸುವುದಾಗಿ ಹೇಳಿಕೊಂಡಿದ್ದ ಕೃಷಿಕನ ಮೊಬೈಲ್ ಫೋನ್ ಲೊಕೇಶನ್ ಜಾಡು ಹಿಡಿದು ಕಾವೂರು ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೇಳೆ ಆತನನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಸಲೀಂ ಅಬ್ಬಾಸ್, ಉಪ ಪೊಲೀಸ್ ನಿರೀಕ್ಷಕ ಜ್ಞಾನಶೇಖರ್, ಎಎಸ್ಸೆ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ ಸುರೇಂದ್ರ, ದೀಪಕ್, ಇಮ್ಮಿಯಾಝ್, ರಾಕೇಶ್, ಫಕಿರೇಶ್, ಶರಣ ಬಸವ, ಅನ್ವರ್, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.




