ಪುತ್ತೂರು ಜಾತ್ರಾ ಗದ್ದೆಯಲ್ಲಿ ಗಲಾಟೆ- ಇಬ್ಬರ ಬಂಧನ
ಪುತ್ತೂರು ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಭಂಗ ಉಂಟುಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪುತ್ತೂರು ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎ.20ರಂದು ರಾತ್ರಿ ವೇಳೆ ದೇವಸ್ಥಾನದ ಜಾತ್ರೆ ನಡೆಯುತ್ತಿದ್ದ ಸ್ಥಳದಲ್ಲಿ ಪುತ್ತೂರು ನಗರ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಕಛೇರಿಯ ಬಳಿ ಸಾರ್ವಜನಿಕರು ಗುಂಪು ಸೇರಿರುವುದನ್ನು ಗಮನಿಸಿದ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.
ಅಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರ ಗಲಾಟೆ ಮಾಡಿಕೊಂಡಿದ್ದು, ಪೊಲೀಸರು ಅವರಿಗೆ ತಿಳುವಳಿಕೆ ನೀಡಿದರೂ ಲೆಕ್ಕಿಸದೆ ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿರುವುದು ಕಂಡುಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ಆರೋಪಿಗಳನ್ನು ನರಿಮೊಗರು ನಿವಾಸಿ ಹರ್ಷ ಗೋಪಾಲ್ (29), ಹಾಗೂ ಕಬಕ ನಿವಾಸಿ ನಿವಾಸಿ ಹರೀಶ್(42) ಎಂದು ಗುರುತಿಸಲಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



