ವಿಟ್ಲ ಸಮುದಾಯ ಆರೋಗ್ಯ ಕೇಂದ್ರ-
ಯೆನಪೋಯ ಮೆಡಿಕಲ್ ಕಾಲೇಜು ಜೊತೆ ಟೈಅಪ್
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವು ಮಂಗಳೂರಿನ ಯೆನಪೋಯ ಮೆಡಿಕಲ್ ಕಾಲೇಜು ಜೊತೆ ಆರೋಗ್ಯ ಸೇವೆ ನೀಡಲು ಟೈಅಪ್ ಆಗಿದ್ದು ಈ ಬಗ್ಗೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಟೈಅಪ್ ಆಗುವ ಮೂಲಕ ಸಮುದಾಯ ಕೇಂದ್ರದಲ್ಲಿರುವ ಆರೋಗ್ಯ ಸೇವಾ ಕೊರತೆಯನ್ನು ನೀಗಿಸಲು ಸಾಧ್ಯವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಅಭಿಪ್ರಾಯಿಸಿದ್ದಾರೆ.

ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಸಮಸ್ಯೆಯ ಜೊತೆಗೆ ಸಿಬಂದಿಗಳ ಕೊರತೆಯೂ ಇತ್ತು. ಈ ಬಗ್ಗೆ ಈಗಾಗಲೇ ಶಾಸಕರು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ರವರಲ್ಲಿ ಮನವಿ ಮಾಡಿ ಕೊರತೆ ನೀಗಿಸುವಂತೆ ಕೇಳಿಕೊಂಡಿದ್ದರು ಮತ್ತು ವಿಧಾನಸಭಾ ಅಧಿವೇಶನದಲ್ಲೂ ವಿಚಾರವನ್ನು ಪ್ರಸ್ತಾಪ ಮಾಡಿದ್ದರು.
ಸರಕಾರಿ ಆಸ್ಪತ್ರೆಗಳಲ್ಲಿ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಮತ್ತು ಸಿಬಂದಿ ಕೊರತೆಯ ಕಾರಣಕ್ಕೆ ಜನರಿಗೆ ಸೇವೆ ನೀಡಲು ಕಷ್ಟಸಾಧ್ಯವಾಗುತ್ತಿದೆ, ಸರಕಾರ ವೈದ್ಯರನ್ನು ನೇಮಕ ಮಾಡುವಂತೆ ಶಾಸಕರು ಮನವಿ ಮಾಡಿದ್ದರು. ಇದೀಗ ಆರೋಗ್ಯ ಸಚಿವಾಲಯ ವಿಟ್ಲ ಸಮುದಾಯ ಆರೋಗ್ಯ ಕೇಂದ್ರವನ್ನು ಮಂಗಳೂರಿನ ಯೆನಪೋಯ ಮೆಡಿಕಲ್ ಕಾಲೇಜು ಜೊತೆ ಟೈಅಪ್ ಮಾಡಿ ಆದೇಶವನ್ನು ಹೊರಡಿಸಿದೆ.



