ಕ್ರೈಂರಾಷ್ಟ್ರೀಯ

ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ದಾಳಿ: ಗಂಭೀರ ಗಾಯ



ಹೊಸದಿಲ್ಲಿ: ಆಸ್ಟ್ರೇಲಿಯಾದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪಿಎಚ್‍ಡಿ ಅಧ್ಯಯನ ನಡೆಸುತ್ತಿದ್ದ ಭಾರತೀಯ ವಿದ್ಯಾರ್ಥಿಯೊಬ್ಬರ ಮೇಲೆ ಅಮಾನುಷ ದಾಳಿ ನಡೆದಿದ್ದು, ಹನ್ನೊಂದು ಬಾರಿ ಚಾಕುವಿನಿಂದ ಇರಿದ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿ ಕುಟುಂಬದವರು ಹೇಳಿದ್ದಾರೆ.

ಆಗ್ರಾ ಮೂಲದ ಶುಭಂ ಗರ್ಗ್ (28) ಎಂಬವರ ಮೇಲೆ‌ ಅ.6ರಂದು ಈ ದಾಳಿ ನಡೆದಿದ್ದು, ವರ್ಣದ್ವೇಷದ ದಾಳಿ ಎಂದು ಆರೋಪಿಸಲಾಗಿದೆ.

ಆಸ್ಟ್ರೇಲಿಯಾ ವೀಸಾ ಪಡೆಯಲು ಕಳೆದ ಏಳು ದಿನಗಳಿಂದ ಪ್ರಯತ್ನಿಸುತ್ತಿದ್ದು, ಸಾಧ್ಯವಾಗುತ್ತಿಲ್ಲ ಎಂದು ಕುಟುಂಬದವರು ಆಪಾದಿಸಿದ್ದಾರೆ. ಮದ್ರಾಸ್ ಐಐಟಿಯಿಂದ ತಂತ್ರಜ್ಞಾನ ವಿಷಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿದ್ದ ಶುಭಂ ಗರ್ಗ್ ಸೆಪ್ಟೆಂಬರ್ 1ರಂದು ಆಸ್ಟ್ರೇಲಿಯಾಗೆ ತೆರಳಿದ್ದರು.

ಶುಭಂ ಗರ್ಗ್ ಅವರ ಮುಖ, ಎದೆ ಹಾಗೂ ಹೊಟ್ಟೆಗೆ ಗಾಯಗಳಾಗಿವೆ. ಈ ದಾಳಿ ಸಂಬಂಧ 27 ವರ್ಷ ವಯಸ್ಸಿನ ಆರೋಪಿಯನ್ನು ಬಂಧಿಸಲಾಗಿದ್ದು, ಹತ್ಯೆ ಯತ್ನ ಆರೋಪ ಹೊರಿಸಲಾಗಿದೆ.

ದಾಳಿಕೋರನನ್ನು ಶುಭಂ ಅಥವಾ ನಮಗೂ ಪರಿಚಯ ಇಲ್ಲ ಎಂದು ಅವರ ಸ್ನೇಹಿತ ಸ್ಪಷ್ಟಪಡಿಸಿದ್ದಾಗಿ ಸಂತ್ರಸ್ತ ವಿದ್ಯಾರ್ಥಿಯ ತಂದೆ ಹೇಳಿದ್ದಾರೆ.

“ಇದು ವರ್ಣದ್ವೇಷದ ದಾಳಿ ಎನಿಸುತ್ತದೆ. ನಮಗೆ ನೆರವು ನೀಡುವಂತೆ ಭಾರತ ಸರ್ಕಾರವನ್ನು ಕೋರಿದ್ದೇವೆ” ಎಂದು ಆಗ್ರಾ ಜಿಲ್ಲಾಧಿಕಾರಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!