ಕ್ರೀಡೆರಾಷ್ಟ್ರೀಯ

ಚೊಚ್ಚಲ ಮಹಿಳಾ ಐಪಿಎಲ್‌ ಕ್ರಿಕೆಟ್‌ಗೆ ಮುಹೂರ್ತ ಫಿಕ್ಸ್



ನವದೆಹಲಿ: ಬಹುನಿರೀಕ್ಷಿತ ಚೊಚ್ಚಲ ಆವೃತ್ತಿಯ ಮಹಿಳಾ ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯು 2023ರ ಮಾರ್ಚ್‌ನಲ್ಲಿ ನಡೆಯಲಿದೆ.

ಪುರುಷರ ಟೂರ್ನಿಗಿಂತ ಮೊದಲು ನಡೆಯಲಿರುವ ಮಹಿಳಾ ಐಪಿಎಲ್‌ನಲ್ಲಿ ಐದು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಮಹಿಳಾ ಐಪಿಎಲ್‌ ಕುರಿತ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಟಿಪ್ಪಣಿಯು ಸುದ್ದಿಸಂಸ್ಥೆಗೆ ಲಭಿಸಿದ್ದು, ಅದರ ಪ್ರಕಾರ ಲೀಗ್ ಹಂತದಲ್ಲಿ 20 ಪಂದ್ಯಗಳು ಇರಲಿದ್ದು, ಪ್ರತಿ ತಂಡಗಳು ಪರಸ್ಪರ ಎರಡು ಬಾರಿ ಮುಖಾಮುಖಿಯಾಗಲಿವೆ. ಲೀಗ್‌ನಲ್ಲಿ ಅಗ್ರಸ್ಥಾನ ಪಡೆಯುವ ತಂಡವು ನೇರವಾಗಿ ಫೈನಲ್‌ಗೆ ಅರ್ಹತೆ ಗಳಿಸಲಿದೆ. ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಸೆಣಸಲಿವೆ.

ಪ್ರತಿ ತಂಡವು ಆಡುವ ಹನ್ನೊಂದರ ಬಳಗದಲ್ಲಿ ಐದು ವಿದೇಶಿ ಆಟಗಾರ್ತಿಯರನ್ನು ಹೊಂದುವ ಅವಕಾಶವಿದೆ.

‘ದೇಶಿ ಮತ್ತು ಅಂತರರಾಷ್ಟ್ರೀಯ ಆಟಗಾರ್ತಿಯರನ್ನೊಳಗೊಂಡ ಸಮತೋಲಿತ ಮತ್ತು ಸ್ಪರ್ಧಾತ್ಮಕ ತಂಡಗಳನ್ನು ಹೊಂದುವ ಉದ್ದೇಶದಿಂದ ಮಹಿಳಾ ಐಪಿಎಲ್‌ಅನ್ನು ತಾತ್ಕಾಲಿಕವಾಗಿ ಐದು ತಂಡಗಳೊಂದಿಗೆ ನಡೆಸಲಾಗುವುದು. ಪ್ರತಿ ತಂಡಗಳು ಆರು ವಿದೇಶಿ ಆಟಗಾರ್ತಿಯರನ್ನೊಳಗೊಂಡು ಗರಿಷ್ಠ 18 ಮಂದಿಯನ್ನು ಹೊಂದಿರುತ್ತವೆ‘ ಎಂದು ಬಿಸಿಸಿಐ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಫೆಬ್ರುವರಿ 9ರಿಂದ 26ರವರೆಗೆ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಆ ಬಳಿಕ ಐಪಿಎಲ್‌ ನಡೆಯುವ ನಿರೀಕ್ಷೆಯಿದೆ.

ಕ್ಯಾರವಾನ್ ಮಾದರಿಯಲ್ಲಿ ಪಂದ್ಯಗಳನ್ನು ನಡೆಸುವ ಸಾಧ್ಯತೆಯಿದೆ. ಎರಡು ತಾಣಗಳಲ್ಲಿ ತಲಾ 10 ಪಂದ್ಯಗಳನ್ನು ಆಡಿಸುವ ನಿರೀಕ್ಷೆಯಿದೆ. ವಲಯವಾರು ಆಧರಿಸಿ ಬೆಂಗಳೂರು, ಅಹಮದಾಬಾದ್‌, ಚೆನ್ನೈ, ದೆಹಲಿ, ಕೋಲ್ಕತ್ತ ಮತ್ತು ಮುಂಬೈ ನಗರಗಳು ಪಂದ್ಯ ಆಯೋಜಿಸುವ ಆಯ್ಕೆ ಪಟ್ಟಿಯಲ್ಲಿವೆ.

Leave a Reply

Your email address will not be published. Required fields are marked *

error: Content is protected !!