ಬಾವಿಗೆ ಬಿದ್ದು ಚಿರತೆ ಸಾವು
ಬಾವಿಗೆ ಬಿದ್ದು ಚಿರತೆಯೊಂದು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ.

ಮೃತಪಟ್ಟ ಚಿರತೆಯು ಸುಮಾರು ಮೂರು ವರ್ಷ ಪ್ರಾಯದ ಗಂಡು ಚಿರತೆ ಎಂದು ಗುರುತಿಸಲಾಗಿದೆ. ಬುಧವಾರ ಬೆಳಗ್ಗೆ ಕುಟುಂಬದ ಸದಸ್ಯರು ನೀರು ಸೇದಲು ಬಾವಿಯ ಬಳಿ ಹೋದಾಗ ಚಿರತೆ ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ.
ಸುದ್ದಿ ತಿಳಿದ ಕೂಡಲೇ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ನಾಯಿಯನ್ನು ಅಟ್ಟಿಸಿಕೊಂಡು ಹೋಗುವಾಗ ಚಿರತೆಯು ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.



