ಕರಾವಳಿರಾಜಕೀಯ

ಮನೆ-ಮನೆಗೆ ಶಾಸಕರ ಅನುದಾನಗಳ ಪ್ರಚಾರ: ಅರಿಯಡ್ಕ ವಲಯ ಕಾಂಗ್ರೆಸ್‌ನಿಂದ ಚಾಲನೆ

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಅರಿಯಡ್ಕ ಗ್ರಾಮಕ್ಕೆ ನೀಡಿದ ಅನುದಾನಗಳ ವಿವರಗಳನ್ನೊಳಗೊಂಡ ಕರಪತ್ರವನ್ನು ಮನೆ-ಮನೆಗೆ ಮುಟ್ಟಿಸುವ ಕಾರ್ಯಕ್ರಮಕ್ಕೆ ಜ.10ರಂದು ಶೇಖಮಲೆಯಲ್ಲಿ ಚಾಲನೆ ನೀಡಲಾಯಿತು.

ಶಿವಪ್ಪ ಎಂಬವರ ಮನೆಯವರಿಗೆ ಕರಪತ್ರ ನೀಡುವ ಮೂಲಕ ಚಾಲನೆ ನೀಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸುಪ್ರೀತ್ ಕಣ್ಣಾರಾಯ ಮಾತನಾಡಿ ಅರಿಯಡ್ಕ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಆಗಿದ್ದು ಅದನ್ನು ಮನೆ-ಮನೆಗೆ ತಿಳಿಸುವ ಕಾರ್ಯ ಮಾಡುತ್ತಿರುವ ಅರಿಯಡ್ಕ ವಲಯ ಕಾಂಗ್ರೆಸ್‌ನ ಯೋಜನೆ ಬಹಳ ಉತ್ತಮವಾಗಿದೆ, ಮುಖ್ಯಮಂತ್ರಿಯವರ ಬೆನ್ನುಬಿಡದೇ ಪುತ್ತೂರಿನ ಅಭಿವೃದ್ಧಿಗೆ ಕೋಟ್ಯಾಂತರ ರೂ. ಅನುದಾನ ತರಲು ಶಾಸಕರು ಯಾವ ರೀತಿ ಪ್ರಯತ್ನಿಸುತ್ತಾರೋ ಅದೇ ರೀತಿ ಅರಿಯಡ್ಕ ವಲಯದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಅವರು ಪ್ರಯತ್ನಿಸುತ್ತಿದ್ದಾರೆ, ಇಲ್ಲಿಗೆ ಇಷ್ಟು ಅನುದಾನ ಬರುವಲ್ಲಿ ಇಕ್ಬಾಲ್ ಹುಸೇನ್ ಅವರ ಹೆಚ್ಚಿನ ಪರಿಶ್ರಮ ಇದೆ ಎಂದು ಅವರು ಹೇಳಿದರು.

ಪುತ್ತೂರಿಗೆ ಮೆಡಿಕಲ್ ಕಾಲೇಜು ಸೇರಿದಂತೆ ಹತ್ತಾರು ಅಭಿವೃದ್ಧಿ ಯೋಜನೆಗಳನ್ನು ತಂದಿರುವ ಶಾಸಕ ಅಶೋಕ್ ರೈ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ನಾವೆಲ್ಲಾ ಶ್ರಮಿಸಬೇಕು, ಶಾಸಕರ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆಗಳಲ್ಲೂ ನಾವು ಗೆಲ್ಲಬೇಕು. ಶಾಸಕರ ಅಭಿವೃದ್ಧಿ ಕಾಮಗಾರಿಗಳನ್ನು ಮನೆ-ಮನೆಗೆ ತಲುಪಿಸುವ ಅರಿಯಡ್ಕ ವಲಯ ಕಾಂಗ್ರೆಸ್‌ನ ಕಾರ್ಯ ಮಾದರಿಯಾಗಿದೆ ಎಂದರು.

ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಮಾತನಾಡಿ ಇತ್ತೀಚೆಗೆ ಅರಿಯಡ್ಕ ವಲಯ ಕಾಂಗ್ರೆಸ್ ವತಿಯಿಂದ ‘ಅರಿಯಡ್ಕ ಉತ್ಸವ’ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅದರಲ್ಲಿ ಶಾಸಕರು ನಮ್ಮ ವಲಯಕ್ಕೆ ನೀಡಿರುವ ಅನುದಾನಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದೆವು, ಅದನ್ನು ಮನೆ-ಮನೆಗೆ ಮುಟ್ಟಿಸುವ ಯೋಜನೆಗೆ ಇದೀಗ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಶಾಸಕರು ನಮ್ಮ ಗ್ರಾಮಕ್ಕೆ ಕೋಟ್ಯಾಂತರ ರೂ ಅನುದಾನ ನೀಡಿದ್ದು ಅದರ ಪ್ರಚಾರವನ್ನು ನಾವು ಗುದ್ದಲಿಪೂಜೆಯ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಬಾರದು, ಶಾಸಕರು ನೀಡಿದ ಅನುದಾನಗಳ ವಿವರವನ್ನು ಪ್ರತೀ ಮನೆಮನೆಗೂ ಮುಟ್ಟಿಸಬೇಕು, ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಅನುದಾನ ನೀಡುವ ಶಾಸಕರನ್ನು ಗ್ರಾಮದ ಜನತೆ ಯಾವತ್ತೂ ಮರೆಯಬಾರದು, ಶಾಸಕರ ಪರವಾಗಿ ನಾವು ಕನಿಷ್ಠ ಗ್ರಾಮ ಮಟ್ಟದಲ್ಲಾದರೂ ಪ್ರಚಾರ ಮಾಡಬೇಕು ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಸುಪ್ರೀತ್ ಕಣ್ಣಾರಾಯ ಅವರನ್ನು ಶಾಲು ಹೊದಿಸಿ, ಹೂಗುಚ್ಚ ನೀಡಿ ಗೌರವಿಸಲಾಯಿತು. ಬೂತ್ ಅಧ್ಯಕ್ಷ ಸತೀಶ್, ಕಾಂಗ್ರೆಸ್ ಕಾರ್ಯಕರ್ತರಾದ ಕೇಶವ, ಶಿವಪ್ಪ, ಮಹಮ್ಮದ್ ಜಾರತ್ತಾರು, ಅಂಗಾರ, ಅಭಿಲಾಷ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!