ಕರಾವಳಿಕ್ರೈಂರಾಜ್ಯ

ಮಂಗಳೂರು ಸಿಸಿಬಿ ಪೊಲೀಸರ ಯಶಸ್ವೀ ಕಾರ್ಯಾಚರಣೆ: 4 ಕೋ.ರೂ. ಮೌಲ್ಯದ ಎಂಡಿಎಂಎ ವಶ: ಉಗಾಂಡದ ಮಹಿಳೆಯ ಸೆರೆ



ಮಂಗಳೂರು: ನಗರದ ಪೆಡ್ಲರ್‌ಳಿಗೆ ಬೆಂಗಳೂರಿನಿಂದ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಆರೋಪದಲ್ಲಿ ಉಗಾಂಡ ಮೂಲದ ಮಹಿಳೆಯೊಬ್ಬಳನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.


ಜಲಿಯಾ ಝಲ್ಟಾಂಗೊ ಬಂಧಿತ ವಿದೇಶಿ ಮಹಿಳೆ. ಈಕೆಯಿಂದ ಸುಮಾರು ನಾಲ್ಕು ಕೋ. ರೂ. ಮೌಲ್ಯದ ನಾಲ್ಕು ಕೆಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಮಂಗಳೂರಿನ ಆರು ಮಂದಿ ಮಾದಕ ವಸ್ತು ಪೆಡ್ಲರ್ ಗಳು ಈಕೆಯಿಂದ ಎಂಡಿಎಂಎ ಖರೀದಿಸಿ ವಿದ್ಯಾರ್ಥಿಗಳು, ಯುವಕರು, ನಾಗರಿಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.


ಕಳೆದ ಡಿಸೆಂಬರ್‌ನಲ್ಲಿ ಮುಲ್ಕಿ ಠಾಣಾ ಪೊಲೀಸರು ಬೈಂದೂರು ತಾಲೂಕಿನ ನಾವುಂದ ಗ್ರಾಮದ ಮುಹಮ್ಮದ್ ಶಿಯಾಬ್, ನರಿಂಗಾನದ ಮುಹಮ್ಮದ್ ನೌಷಾದ್, ಮಂಗಳೂರು ಕಸಬಾ ಬೆಂಗ್ರೆಯ ಇಮ್ರಾನ್, ಬಂಟ್ವಾಳದ ರಾಮಲ್‌ ಕಟ್ಟೆಯ ನಿಸಾರ್ ಅಹ್ಮದ್ ಎಂಬವರನ್ನು ಬಂಧಿಸಿ 524 ಗ್ರಾಂ. ಎಂಡಿಎಂಎ ವಶ ಪಡಿಸಿಕೊಂಡಿದ್ದರು. ಇನ್ನೊಂದು ಪ್ರಕರಣದಲ್ಲಿ ಸುರತ್ಕಲ್ ಠಾಣೆಯ ಪೊಲೀಸರು ಕಾಪು ಮಜೂರಿನ ಮುಹಮ್ಮದ್ ಇಕ್ಬಾಲ್ ಮತ್ತು ಪಡುಬಿದಿರೆ ಸಮೀಪದ ಕಂಚಿನಡ್ಕದ ಶೆಹರಾಝ ಶಾರೂಕ್ ಎಂಬವರನ್ನು ಬಂಧಿಸಿ 200 ಗ್ರಾಂ. ಎಂಡಿಎಂಎ ವಶಪಡಿಸಿಕೊಂಡಿದ್ದರು.

ಈ ಎರಡು ಪ್ರಕರಣಗಳಲ್ಲಿ ಆರೋಪಿಗಳು ವಿಚಾರಣೆಯ ವೇಳೆ ತಾವು ಬೆಂಗಳೂರಿನಿಂದ ಉಗಾಂಡ ಮೂಲದ ಜಲಿಯಾ ಝಲ್ಲಾಂಗೊ ಎಂಬಾಕೆಯಿಂದ ಡ್ರಗ್ಸ್ ಖರೀದಿಸಿ ತರುತ್ತಿದ್ದುದಾಗಿ ತಿಳಿಸಿದ್ದರು. ಅದರಂತೆ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈಕೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!