ಕರಾವಳಿಕ್ರೈಂ

ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿಯ ಸೆರೆ

ಬೆಳ್ತಂಗಡಿ: ಮನೆ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ  ಕುಖ್ಯಾತ ಕಳ್ಳನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ಬೆಳ್ತಂಗಡಿ, ಮಾಲಾಡಿ ಗ್ರಾಮದ ನಿವಾಸಿ ಪ್ರಕಾಶ್‌  ಶೆಟ್ಟಿ ಅವರ ದೂರಿನಂತೆ ಸದ್ರಿಯವರ ಮನೆಯ ಸಮೀಪ ಪ್ರೇಮಾ ಶೆಟ್ಟಿ ಎಂಬವರ ಮನೆಯಿದ್ದು, ಪ್ರೇಮಾ ಶೆಟ್ಟಿರವರು ಕೆಲ ಸಮಯದಿಂದ ವಿದೇಶದಲ್ಲಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಗೆ ಸಿ.ಸಿ ಟಿ.ವಿ ಅಳವಡಿಸಿರುತ್ತಾರೆ. ದಿನಾಂಕ:9/11/2025 ರಂದು ಬೆಳಿಗ್ಗೆ, ಪ್ರೇಮಾರವರ ಮಗಳು ಪ್ರಕಾಶ್ ಶೆಟ್ಟಿ ಅವರಿಗೆ ಕರೆ ಮಾಡಿ ತಾಯಿಯ ಮನೆಯಲ್ಲಿ  ಯಾರೋ ವ್ಯಕ್ತಿ ಕಳ್ಳತನಕ್ಕೆ ಬಂದಿರುವಂತೆ ಸಿ.ಸಿ ಟಿ.ವಿಯಲ್ಲಿ ಕಾಣುತ್ತಿರುವುದಾಗಿ ತಿಳಿಸಿರುತ್ತಾರೆ.

ತಕ್ಷಣ ಅವರು, ಪ್ರೇಮರವರ ಮನೆಯ ಬಳಿ ತೆರಳಿ ನೋಡಿದಾಗ, ಪ್ರೇಮಾರವರ ಮನೆಯ ಮೇಲ್ಚಾವಣಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯು ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದು ನಿಂತುಕೊಂಡಿದ್ದು, ಪ್ರಕಾಶ್ ಶೆಟ್ಟಿ ನೋಡಿ ಕೆಳಗೆ ಹಾರಿ ಓಡಿ ತಪ್ಪಿಸಲು ಪ್ರಯತ್ನಿಸಿರುತ್ತಾನೆ. ಈ ವೇಳೆ ಆತನನ್ನು ಹಿಡಿಯಲು ಪ್ರಯತ್ನಿಸಿದಾಗ, ಸದ್ರಿ ಅಪರಿಚಿತ ವ್ಯಕ್ತಿಯು ಆತನ ಕೈಯಲ್ಲಿದ್ದ ರಾಡಿನಿಂದ ಹಲ್ಲೆ ನಡೆಸಿರುತ್ತಾನೆ. ಬಳಿಕ ಸ್ಥಳೀಯ ನಿವಾಸಿಗಳ ಸಹಾಯದಿಂದ ಅಪರಿಚಿತ ವ್ಯಕ್ತಿಯನ್ನು ಹಿಡಿಯಲಾಗಿದೆ.

ಆತನ ಬಗ್ಗೆ ವಿಚಾರಿಸಲಾಗಿ ಆತನು ಕೇರಳ ಮೂಲದ, ತಲಪಾಡಿ ನಿವಾಸಿ ಕಿರಣ್ ಎಂಬುದಾಗಿ ತಿಳಿಸಿದ್ದು, ನಂತರ ಆತನನ್ನು ಪೂಂಜಾಲಕಟ್ಟೆ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಲಾಗಿರುತ್ತದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ: 73/2025,  ಕಲಂ: 331(1) 62 118(1) 307  BNS ACT ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಆರೋಪಿಯ ಪ್ರಾಥಮಿಕ ವಿಚಾರಣೆಯ ವೇಳೆ ಆರೋಪಿತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ, ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಸೇರಿದಂತೆ, ಒಟ್ಟು 13  ಪ್ರಕರಣಗಳು
ದಾಖಲಾಗಿರುವುದು ತಿಳಿದುಬಂದಿದ್ದು, ತನಿಖೆ ಮುಂದುವರಿದಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!