ಎಸ್.ಐ.ಆರ್ ಅಕ್ರಮ, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯದಿಂದ ಪ್ರತಿಭಟನೆ
ಪುತ್ತೂರು: ಎಸ್.ಐ.ಆರ್ ಮೂಲಕ ಅರ್ಹ ಮತದಾರರನ್ನೇ ಪಟ್ಟಿಯಿಂದ ಹೊರಹಾಕಿ ಅಕ್ರಮ ಎಸಗಲಾಗುತ್ತಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಮತ್ತು ದೇಶ ದ್ರೋಹದ ಕೃತ್ಯವಾಗಿದೆ, ಜಾಪ್ರಭುತ್ವದಲ್ಲಿ ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಅಂತಹ ಧ್ವನಿಗಳನ್ನು ಹತ್ತಿಕ್ಕುವ ಪ್ರಯತ್ನ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ, ಸರ್ವಾಧಿಕಾರಿ ಆಡಳಿತದ ಮೂಲಕ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಪ್ರಯತ್ನ ದೇಶದಲ್ಲಿ ನಡೆಯುತ್ತಿದ್ದು ಇದಕ್ಕೆ ನಾವ್ಯಾರೂ ಹೆದರುವುದಿಲ್ಲ ಎಂದು ಮಾನವ ಬಂಧುತ್ವ ವೇದಿಕೆಯ ಸಂಚಾಲಕ, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಹೇಳಿದರು. ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ವತಿಯಿಂದ ಎಸ್ಐಆರ್ ಅಕ್ರಮಗಳ ವಿರುದ್ಧ ಹಾಗೂ ಮುಖ್ಯ ಚುನಾವಣಾಧಿಕಾರಿ ವಜಾಗೊಳಿಸಲು ಆಗ್ರಹಿಸಿ ದೇಶಾದ್ಯಂತ ಜಂತರ್ ಮಂತರ್ ಬೆಂಬಲಿಸಿ ನ.೧೩ರಂದು ಸಂಜೆ ಕುಂಬ್ರ ಜಂಕ್ಷನ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಎಸ್.ಐ.ಆರ್. ಪ್ರಕ್ರಿಯೆಯ ಮೂಲಕ ಸುಮಾರು 13 ಕೋಟಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಾಗ ಅನುಸರಿಸಿದ ಮಾನದಂಡಗಳು ಯಾವುದು ಎಂಬುದನ್ನು ಜನರಿಗೆ ಸ್ಪಷ್ಟಪಡಿಸಬೇಕು. ಪಟ್ಟಿಯಲ್ಲಿ ನಿಜವಾಗಿಯೂ ಅನರ್ಹರು ಎಷ್ಟು ಮಂದಿ? ಅರ್ಹ ಮತದಾರರ ಹೆಸರುಗಳು ತಪ್ಪಾಗಿ ಕೈಬಿಟ್ಟಿರುವುದು ಎಷ್ಟು? ಎಂಬುದಕ್ಕೆ ಚುನಾವಣಾ ಆಯೋಗ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಅಕ್ರಮ ಬಾಂಗ್ಲಾದವರ ಪಟ್ಟಿ ಎಲ್ಲಿದೆ?
ಅಮಿತ್ ಶಾ ಅವರು ದೇಶದಲ್ಲಿ ಮೂರು ಕೋಟಿ ಬಾಂಗ್ಲಾದೇಶಿಗರು ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಹೇಳುತ್ತಾರೆ. ಹಾಗಾದರೆ ಆ ಮೂರು ಕೋಟಿ ಬಾಂಗ್ಲಾದೇಶಿಗರ ಹೆಸರುಗಳ ಪಟ್ಟಿ ಎಲ್ಲಿದೆ? ಅವರ ಗುರುತು ಮತ್ತು ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ. ಕೇವಲ ಆರೋಪಗಳನ್ನು ಮಾಡುವುದರಿಂದ ಸಾಲದು, ಅದಕ್ಕೆ ಸೂಕ್ತ ದಾಖಲೆ ಮತ್ತು ಪುರಾವೆಗಳನ್ನು ನೀಡಬೇಕು ಎಂದು ಅಮಳ ರಾಮಚಂದ್ರ ಸವಾಲು ಹಾಕಿದರು.
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ:
ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಅನ್ಯಾಯವಾಗಿ ಕೈಬಿಡಬಾರದು. ಚುನಾವಣಾ ಆಯೋಗವು ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ಜನರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು. ಎಸ್.ಐ.ಆರ್. ಪ್ರಕ್ರಿಯೆಯನ್ನು ಮರುಪರಿಶೀಲಿಸಿ, ಮತದಾರರ ಹಕ್ಕುಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಮಳ ರಾಮಚಂದ್ರ ಆಗ್ರಹಿಸಿದರು.
ಮತದಾರರ ಹಕ್ಕು ಕಸಿಯುವ ಹುನ್ನಾರ- ನಯೀಮ್ ಫೈಝಿ
ಎಸ್ಕೆಎಸ್ಸೆಸ್ಸೆಫ್ ಸುಳ್ಯ ವಲಯ ಉಪಾಧ್ಯಕ್ಷ ನಯೀಂ ಫೈಝಿ ಮುಕ್ವೆ ಮಾತನಾಡಿ ಎಸ್.ಐ.ಆರ್. ಪ್ರಕ್ರಿಯೆಯು ದೇಶದ ಜನರಲ್ಲಿ ಆತಂಕ ಮತ್ತು ಗೊಂದಲ ಸೃಷ್ಟಿಸಿದ್ದು ಮತದಾರರ ಪಟ್ಟಿಯಿಂದ ಕೋಟ್ಯಾಂತರ ಜನರ ಹೆಸರುಗಳನ್ನು ಕೈಬಿಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು. ಎಸ್.ಐ.ಆರ್ ವಿರುದ್ಧ ದೆಹಲಿ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರನ್ನು ದಮನಿಸಲು ಪ್ರಯತ್ನಿಸಿರುವುದು ಕೂಡಾ ಹಲವು ಸಂಶಯಗಳನ್ನು ಹುಟ್ಟು ಹಾಕಿದ್ದು ಮುಖ್ಯ ಚುನಾವಣಾ ಆಯುಕ್ತರನ್ನು ಪ್ರಶ್ನಿಸಿದಾಗ ಅವರ ಪರವಾಗಿ ಕೇಂದ್ರ ಸರ್ಕಾರ ಮಾತನಾಡಬೇಕಾದ ಅಗತ್ಯವೇನು? ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯಾಗಿದ್ದು, ಅದರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಕೇಳಿದಾಗ ಸಮರ್ಪಕ ಉತ್ತರ ನೀಡಬೇಕಾದ ಜವಾಬ್ದಾರಿ ಆಯೋಗಕ್ಕಿದೆ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ ಎಂಬುದು ಅರ್ಹ ಮತದಾರರನ್ನು ಗುರುತಿಸುವ ಪ್ರಕ್ರಿಯೆಯಾಗಬೇಕೇ ಹೊರತು, ಯಾವುದೇ ಸಮುದಾಯದ ಜನರನ್ನು ಗುರಿಯಾಗಿಸಿ ಅವರ ಹಕ್ಕುಗಳನ್ನು ಕಸಿಯುವ ಅಸ್ತ್ರವಾಗಬಾರದು ಎಂದು ನಯೀಮ್ ಫೈಝಿ ಹೇಳಿದರು. ಎಸ್.ಕೆ.ಎಸ್.ಎಸ್.ಎಫ್. ಸಂಘಟನೆಯು ಈ ದೇಶಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು ದೇಶದ ಸಾಮಾಜಿಕ ಸಾಮರಸ್ಯ ಮತ್ತು ನ್ಯಾಯದ ಪರವಾಗಿ ಸಂಘಟನೆ ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿದೆ ಎಂದು ಅವರು ಹೇಳಿದರು.
ಸಂವಿಧಾನಕ್ಕೆ ಎಸಗುತ್ತಿರುವ ದ್ರೋಹ-ಮಹಮ್ಮದ್ ಬಡಗನ್ನೂರು
ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ ಎಸ್.ಐ.ಆರ್. ಪ್ರಕ್ರಿಯೆಯ ಮೂಲಕ ಆದಿವಾಸಿಗಳು, ಅಲ್ಪಸಂಖ್ಯಾತರು ಹಾಗೂ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗಿದ್ದು ಇದು ಕೇವಲ ಮತದಾರರ ಪಟ್ಟಿ ಪರಿಷ್ಕರಣೆಯಲ್ಲ, ಸಂವಿಧಾನಕ್ಕೆ ಎಸಗುತ್ತಿರುವ ದ್ರೋಹವಾಗಿದೆ ಎಂದು ಹೇಳಿದರು. ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು ಮತ್ತು ಮತದಾನದ ಅಧಿಕಾರವನ್ನು ನೀಡಿದೆ, ಆದರೆ ಎಸ್.ಐ.ಆರ್. ಹೆಸರಿನಲ್ಲಿ ದುರ್ಬಲ ವರ್ಗಗಳ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮತದಾನದ ಹಕ್ಕಿಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ, ಸಂವಿಧಾನದ ಆಶಯಗಳನ್ನು ಮರೆತು ತಮಗೆ ತೋಚಿದಂತೆ ಎಸ್ಐಆರ್ ಅಕ್ರಮ ನಡೆಸಿ ಜನರ ಹಕ್ಕಿನ ಮೇಲೆ ಚೆಲ್ಲಾಟವಾಡಿದ ಜ್ಞಾನೇಶ್ ಕುಮಾರ್ ಅವರಿಗೆ ಈ ಮಣ್ಣಿನ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಎಸ್.ಐ.ಆರ್. ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು, ಯಾವುದೇ ಅರ್ಹ ಮತದಾರರ ಹೆಸರನ್ನು ಕೈಬಿಡಬಾರದು ಎಂದು ಮಹಮ್ಮದ್ ಬಡಗನ್ನೂರು ಆಗ್ರಹಿಸಿದರು.

ನಮ್ಮದು ಅನ್ಯಾಯದ ವಿರುದ್ಧದ ಹೋರಾಟ-ಮಹಮ್ಮದ್ ಕೆ.ಎಚ್
ಎಸ್ಕೆಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಉಪಾಧ್ಯಕ್ಷ ಮಹಮ್ಮದ್ ಕೆ.ಎಚ್ ಮಾತನಾಡಿ ನಮ್ಮದು ಅನ್ಯಾಯ, ಅಕ್ರಮದ ವಿರುದ್ಧದ ಹೋರಾಟವೇ ಹೊರತು ಯಾವುದೇ ಪಕ್ಷ, ಧರ್ಮ ಅಥವಾ ಸಮುದಾಯದ ವಿರುದ್ಧದ ಪ್ರತಿಭಟನೆ ಅಲ್ಲ, ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು, ನ್ಯಾಯ ಮತ್ತು ಗೌರವ ಸಿಗಬೇಕು ಎಂಬುದೇ ನಮ್ಮ ಆಶಯ, ಆದರೆ ಇಂದು ಎಸ್ಐಆರ್ ಮೂಲಕ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು, ಅವರನ್ನು ವ್ಯವಸ್ಥೆಯಿಂದ ದೂರ ಮಾಡುವ ಪ್ರಯತ್ನಗಳು ನಡೆಯುತ್ತಿದೆ ಎಂಬ ಆತಂಕ ಜನರಲ್ಲಿ ಮೂಡಿದೆ ಎಂದು ಅವರು ಹೇಳಿದರು. ಈ ದೇಶದ ಜನರಿಗೆ ಇಲ್ಲಿ ಬದುಕುವ, ತಮ್ಮ ಹಕ್ಕುಗಳನ್ನು ಪಡೆಯುವ ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತುವ ಅಧಿಕಾರವಿದೆ, ಅಲ್ಪಸಂಖ್ಯಾತರನ್ನು ಯಾಕೆ ಪ್ರತ್ಯೇಕವಾಗಿ ನೋಡಬೇಕು? ಅವರನ್ನು ಯಾಕೆ ದೂರ ಮಾಡಬೇಕು? ದೇಶದ ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿರುವಾಗ, ಧರ್ಮದ ಆಧಾರದಲ್ಲಿ ಯಾರನ್ನೂ ಅನ್ಯಾಯಕ್ಕೆ ಒಳಪಡಿಸಬಾರದು. ನಾವು ಪ್ರಶ್ನಿಸುತ್ತಿರುವುದು ಒಂದು ನಿರ್ದಿಷ್ಟ ವ್ಯಕ್ತಿಯ ನಡೆ, ನಿರ್ಧಾರ ಮತ್ತು ಅದರಿಂದ ಉಂಟಾಗುತ್ತಿರುವ ಅನ್ಯಾಯವನ್ನಾಗಿದೆ, ವ್ಯಕ್ತಿಯ ತಪ್ಪುಗಳನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಹಕ್ಕು. ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ಪ್ರಶ್ನಿಸುವವರನ್ನೇ ಗುರಿಯಾಗಿಸುವುದು ಸರಿಯಾದ ಕ್ರಮವಲ್ಲ, ಸಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ನಮ್ಮ ಧ್ವನಿ ಸದಾ ಮೊಳಗುತ್ತಿರಲಿದೆ ಎಂದು ಮಹಮ್ಮದ್ ಕೆ.ಎಚ್ ಎಚ್ಚರಿಕೆ ನೀಡಿದರು.
ವೇದಿಕೆಯಲ್ಲಿ ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಕಾಂಗ್ರೆಸ್ ಮುಖಂಡ ರಕ್ಷಿತ್ ರೈ ಮುಗೇರು, ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಹಿರಾ ಅಬ್ದುಲ್ ಖಾದರ್ ಹಾಜಿ, ಸಂಶುದ್ದೀನ್ ದಾರಿಮಿ, ಅಶ್ರಫ್ ದಾರಿಮಿ ಕೂಡುರಸ್ತೆ, ಸಿ.ಕೆ ಮಹಮ್ಮದ್ ದಾರಿಮಿ, ಶಾಹುಲ್ ಹಮೀದ್ ದಾರಿಮಿ, ಮಜೀದ್ ಬಾಳಾಯ ಉಪಸ್ಥಿತರಿದ್ದರು.
ಹಸನ್ ಬಾಖವಿ ಪ್ರಾರ್ಥಿಸಿದರು. ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ಅಧ್ಯಕ್ಷ ಸಿದ್ದೀಕ್ ಸುಲ್ತಾನ್ ಸ್ವಾಗತಿಸಿದರು. ವಲಯ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಸ್ಲಮಿ ಅಮ್ಚಿನಡ್ಕ ವಂದಿಸಿದರು. ವಲಯ ಕೋಶಾಧಿಕಾರಿ ಅಬ್ದುಲ್ ಸಲಾಂ ಮೇನಾಲ ಕಾರ್ಯಕ್ರಮ ನಿರೂಪಿಸಿದರು. ವಿಖಾಯ ಕುಂಬ್ರ ವಲಯ ಕೋಆರ್ಡಿನೇಟರ್ ಶಾಫಿ ಬೇರಿಕೆ, ಚೇರ್ಮೆನ್ ಝುಬೈರ್ ಮಾಡನ್ನೂರು, ಕನ್ವೀನರ್ ಆದಂ ಕೆ.ಟಿ ಸಹಿತ ಎಸ್ಕೆಎಸ್ಸೆಎಸ್ಸೆಫ್ನ ಪದಾಧಿಕಾರಿಗಳು, ವಿಖಾಯ ಕಾರ್ಯಕರ್ತರು ಸಹಕರಿಸಿದರು. ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.




