ಕರಾವಳಿರಾಜಕೀಯ

ಶಾಸಕರು ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಹೇಳಿಲ್ಲ, ಎಸ್.ಡಿ.ಪಿ.ಐ ಹೇಳಿಕೆ ಖಂಡನೀಯ-ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ

ಪುತ್ತೂರು: ಈಶ್ವರಮಂಗಲದಲ್ಲಿ ಅಕ್ರಮ ಗೋಸಾಗಾಟಗಾರನ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಪೊಲೀಸರ ನಡೆಯನ್ನು ಶ್ಲಾಘಿಸಿ ಶಾಸಕ ಅಶೋಕ್ ರೈಯವರು ಮಾಧ್ಯಮದ ಜೊತೆ ಮಾತನಾಡುವ ವೇಳೆ ಗುಂಡು ಈಗ ಕಾಲಿಗೆ ಬಿದ್ದಿದೆ, ಮುಂದೆ ಬೇರೆ ಬೇರೆ ಕಡೆ ಬೀಳಬಹುದು ಎಂದಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು. ಶಾಸಕರ ಹೇಳಿಕೆಯನ್ನು ಖಂಡಿಸಿ ಅ.25ರಂದು ಎಸ್‌ಡಿಪಿಐ ಪತ್ರಿಕಾಗೋಷ್ಠಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಮುಖರು ಅ.25ರಂದು ಮದ್ಯಾಹ್ನ ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಶಾಸಕರು ಗುಂಡು ಹಾರಿಸುವ ವಿಚಾರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಹೇಳಿಲ್ಲ,  ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಶಾಸಕರು ಹೇಳಿಕೆ ನೀಡಿದ್ದಾರೆ ಎಂದು ಎಸ್‌ಡಿಪಿಐಯವರು ಹೇಳಿದ್ದು ಇದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.


ಶಾಸಕ ಅಶೋಕ್ ರೈ ಬಿಜೆಪಿ ಮತ್ತು ಸಂಘದ ಮನಸ್ಥಿತಿಯಿಂದ ಹೊರಬಂದಿಲ್ಲ ಎಂದು ಎಸ್‌ಡಿಪಿಐಯವರು ಹೇಳಿದ್ದಾರೆ, ಆದರೆ ಅಶೋಕ್ ರೈ ಯಾರೆಂದು ಅವರ ಜನಮನ ಕಾರ್ಯಕ್ರಮ ನೋಡಿದರೆ ತಿಳಿಯುತ್ತದೆ, ಎಲ್ಲಾ ಜಾತಿ, ಧರ್ಮದವರು ಜನಮನ ಕಾರ್ಯಕ್ರಮಕ್ಕೆ ಬಂದಿದ್ದಾರೆ, ಇದು ಅವರು ಏನೆಂದು ತೋರಿಸುತ್ತದೆ ಎಂದು ನೂರುದ್ದೀನ್ ಸಾಲ್ಮರ ತಿಳಿಸಿದರು.


ಯು.ಟಿ ತೌಸೀಫ್ ಮಾತನಾಡಿ ಶಾಸಕ ಅಶೋಕ್ ರೈ ಬಿಜೆಪಿಯಲ್ಲಿದ್ದಾಗಲೂ ಮುಸ್ಲಿಮರ ವಿರುದ್ಧ ಯಾವುದೇ ಹೇಳಿಕೆ ನೀಡಿದವರಲ್ಲ, ಮೊನ್ನೆ ನಡೆದ ಅಶೋಕ ಜನಮನಕ್ಕೂ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು ಎಂದು ಹೇಳಿದರು. ಅಕ್ರಮ ಗೋಸಾಗಾಟ ವಿಚಾರದಲ್ಲಿ ಶಾಸಕರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ, ಅವರು ಯಾವುದೇ ಸಮುದಾಯವನ್ನು ಗುರಿಯಾಗಿಸಿ ಹೇಳಿಕೆ ನೀಡಿಲ್ಲ ಎಂದು ಅವರು ಹೇಳಿದರು.


ಅಬ್ದುಲ್ ರಹಿಮಾನ್ ಆಜಾದ್ ಮಾತನಾಡಿ ಶಾಸಕರಾಗಿ ಅಶೋಕ್ ರೈ ಬಂದ ಬಳಿಕ ಮಸೀದಿ, ಮದ್ರಸಗಳ ರಸ್ತೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ, ಶಾಸಕರ ಮೇಲೆ ಸುಮ್ಮನೆ ಗೂಬೆ ಕೂರಿಸುವ ಕೆಲಸವನ್ನು ಯಾರೂ ಮಾಡಬೇಡಿ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!