ಕರಾವಳಿ

ಅಕ್ರಮ ಜಾನುವಾರು ಸಾಗಾಟ ಪ್ರಕರಣ
ಘಟನೆಯನ್ನು ತಿರುಚಿ ಸುಳ್ಳು ಪ್ರಚಾರ ಮಾಡಿದರೆ ಕಾನೂನು ಕ್ರಮ: ಎಸ್ಪಿ

ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಮಂಗಲದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಬುಧವಾರ ಮುಂಜಾನೆ ವಾಹನ ವೊಂದನ್ನು ವಶಕ್ಕೆ ಪಡೆಯುವ ವೇಳೆ ಓರ್ವ ಆರೋಪಿಯ ಕಾಲಿಗೆ ಶೂಟೌಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಎಸ್ಪಿ ಶುಕ್ರವಾರ ಪ್ರಕಟನೆಯೊಂದನ್ನು ಹೊರಡಿಸಿದ್ದಾರೆ.

ಘಟನೆಯನ್ನು ಎಲ್ಲರೂ ವಿಮರ್ಶೆ ಮಾಡಬಹುದು. ಆದರೆ ಸತ್ಯವನ್ನು ತಿರುಚಿ ಸುಳ್ಳು ನಿರೂಪಣೆಯನ್ನು ಸೃಷ್ಟಿಸಿ ಪ್ರಚಾರಕ್ಕೆ ಬಳಸಿಕೊಳ್ಳುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಎಚ್ಚರಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಅರುಣ್ ಕುಮಾರ್ ಪುತ್ತಿಲ ಕೈಯಲ್ಲಿ ಕತ್ತಿ ಹಿಡಿದುಕೊಂಡು ಲಾರಿಯಲ್ಲಿನ ಹಗ್ಗ-ಟರ್ಪಾಲ್ ಕೊಯ್ಯುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ವಿವರಣೆ ನೀಡಿರುವ ಎಸ್ಪಿ, ಈ ಘಟನೆಯ ನಂತರ ಪೊಲೀಸರ ಜೊತೆಗೆ ಸ್ಥಳೀಯರು ಹಾಗೂ ಅರುಣ್ ಕುಮಾರ್ ಪುತ್ತಿಲ ಜಾನುವಾರುಗಳನ್ನು ವಾಹನದಿಂದ ಇಳಿಸುವ ಕೆಲಸ ಮಾಡಿದ್ದಾರೆ. ಜಾನುವಾರುಗಳ ಇನ್ನಷ್ಟು ಸಾವನ್ನು ತಪ್ಪಿಸುವ ಉದ್ದೇಶದಿಂದ ಪೊಲೀಸ್ ನಿರೀಕ್ಷಕರು ಅದಕ್ಕೆ ಅನುಮತಿ ನೀಡಿದ್ದಾರೆ. ಈ ಪ್ರಕರಣದಲ್ಲಿ, ಯಾವುದೇ ಧಾರ್ಮಿಕ ಸಂಘಟನೆ ಅಥವಾ ವ್ಯಕ್ತಿಯೊಂದಿಗೆ ಪೊಲೀಸರ ಯಾವುದೇ ಸಹಭಾಗಿತ್ವ ಇಲ್ಲ. ಆದರೆ ಇನ್ ಸ್ಪೆಕ್ಟರ್ ದೂರವಾಣಿಯಲ್ಲಿ ಮಾತನಾಡುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಅಪರಾಧ ಸ್ಥಳವನ್ನು ರಾಜಕೀಯ ವೇದಿಕೆಯಾಗಿ ತಿರುಚುವ ಅವಕಾಶವಿರುವ ತಪ್ಪು ನಿರ್ಣಯ ತೆಗೆದುಕೊಂಡಿರುವುದು ಕಂಡುಬಂದಿದೆ. ಈ ಬಗ್ಗೆ ಇನ್‌ಸ್ಪೆಕ್ಟರ್‌ಗೆ ಚಾರ್ಜ್ ಮೆಮೊ ನೀಡಲಾಗುವುದು. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹೇಳಿದ್ದಾರೆ.

ಜಾನುವಾರ ಸಾಗಾಟದ ವಾಹನವನ್ನು ಪೋಲಿಸರು ಹಿಂಬಾಲಿಸಿ ಬಳಿಕ ನಿಲ್ಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ವಾಹನ ನಿಲ್ಲಿಸುವಲ್ಲಿ ಯಾವುದೇ ಸಂಸ್ಥೆಯ ಪಾತ್ರವು ಇರುವುದಿಲ್ಲ ಅಥವಾ ಯಾವುದೇ ಸಂಸ್ಥೆಗಳ ಸಹಕಾರವನ್ನು ಪೊಲೀಸರು ಪಡೆದಿಲ್ಲ. ಪ್ರಕರಣವನ್ನು ನ್ಯಾಯಸಮ್ಮತ ತನಿಖೆಗಾಗಿ ಪುತ್ತೂರು ಉಪವಿಭಾಗದ ವ್ಯಾಪ್ತಿಯಿಂದ ವರ್ಗಾಯಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!