ಕರಾವಳಿ

ಕೂರತ್ ತಂಙಳ್ ಉರೂಸ್, ಅನ್ನದಾನ
ಎಲ್ಲೆಡೆಯಿಂದ ಹರಿದು ಬಂದ ಜನಸಾಗರ:
85 ಸಾವಿರಕ್ಕೂ ಅಧಿಕ ಮಂದಿಗೆ ಅನ್ನದಾನ




ಪುತ್ತೂರು: ಖುರ್ರತುಸ್ಸಾದಾತ್ ಕೂರತ್ ತಂಙಳ್‌ರವರ ಪ್ರಥಮ ವರ್ಷದ ಉರೂಸ್ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಜೂ.26ರಿಂದ ಜೂ.29ರ ವರೆಗೆ ನಡೆದ ಉರೂಸ್ ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ. ಅದರಲ್ಲೂ ಉರೂಸ್
ಪ್ರಯುಕ್ತ ಜೂ.29ರಂದು ನಡೆದ ಅನ್ನದಾನ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಮತ್ತು ಕೇರಳದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಮಖಾಂ ಝಿಯಾರತ್ ನಡೆಸಿ ಅನ್ನದಾನ ಸ್ವೀಕರಿಸಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ ಸಾರ್ವಜನಿಕ ಅನ್ನದಾನ ವಿತರಣೆ ಆರಂಭಗೊಂಡಿದ್ದು ರಾತ್ರಿ ವರೆಗೂ ಅನ್ನದಾನ ವಿತರಣೆ ನಡೆಯಿತು.


ಬೆಳಗ್ಗಿನಿಂದಲೇ ಕೂರತ್‌ನಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ವಾಹನಗಳ ಪಾರ್ಕಿಂಗ್‌ಗೆ ಬೇರೆ-ಬೇರೆ ಜಾಗಗಳಲ್ಲಿ ಸ್ಥಳಾವಕಾಶ ವ್ಯವಸ್ಥೆ ಮಾಡಿದ್ದರೂ ಕೂಡಾ ನಿಯಂತ್ರಿಸಲಾರದಷ್ಟು ಸಂಖ್ಯೆಯಲ್ಲಿ ವಾಹನಗಳು ಆಗಮಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯಿತು. ಮದ್ಯಾಹ್ನದ ವೇಳೆಯಂತೂ ಸವಣೂರು ವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಉರೂಸ್ ಸಮಿತಿಯವರು, ಸ್ವಯಂ ಸೇವಕರು ಮತ್ತು ಪೊಲೀಸರು ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದರೂ ಜನದಟ್ಟಣೆಯಿಂದ ಸುಸೂತ್ರವಾಗಿ ನಿಭಾಯಿಸುವುದು ತ್ರಾಸದಾಯಕವಾಗಿತ್ತು. ಅನ್ನದಾನ ಸ್ವೀಕರಿಸಲು ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಕ್ಯೂನಲ್ಲಿ ನಿಂತು ಅನ್ನದಾನ ಸ್ವೀಕರಿಸುತ್ತಿರುವ ದೃಶ್ಯ ಕಂಡು ಬಂದಿತ್ತು. ನಿರೀಕ್ಷೆಗೂ ಮೀರಿ ಜನಸಾಗರವೇ ಹರಿದು ಬಂದಿದ್ದರಿಂದ ರಾತ್ರಿ ವರೆಗೂ ಅನ್ನದಾನ ವಿತರಣೆ ಮಾಡಬೇಕಾಯಿತು. ಮುಸ್ಲಿಮರು ಮಾತ್ರವಲ್ಲದೇ ಇತರ ಧರ್ಮಗಳ ಬಾಂಧವರು ಕೂಡಾ ಆಗಮಿಸಿ ಅನ್ನದಾನ ಸ್ವೀಕರಿಸುತ್ತಿರುವ ದೃಶ್ಯ ಕಂಡು ಬಂದಿತ್ತು.
ಆಗಮಿಸಿದವರಿಗೆ ಲೈವ್ ಜ್ಯೂಸ್ ವ್ಯವಸ್ಥೆಯನ್ನೂ ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!