ಕರಾವಳಿ

ಸೆ.5: ಪುತ್ತೂರಿನಲ್ಲಿ ಬೃಹತ್ ಮೀಲಾದ್ ಸಮಾವೇಶ, ಕಾಲ್ನಡಿಗೆ ಜಾಥಾ


ಪುತ್ತೂರು: ದ.ಕ. ಜಿಲ್ಲಾ ಮುಸ್ಲಿಮ್ ಯುವಜನ ಪರಿಷತ್ ಮತ್ತು ತಾಲೂಕು ಈದ್ ಮಿಲಾದ್ ಸಮಿತಿಯ ನೇತೃತ್ವದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.)ರ 1500ನೇ ಜನ್ಮ ದಿನಾಚರಣೆಯ ಪ್ರಯುಕ್ತ 33ನೇ ವರ್ಷದ ಮೀಲಾದ್ ಸಮಾವೇಶ ಹಾಗೂ ನಾತೇ ಶರೀಫ್ ಕಾರ್ಯಕ್ರಮ ಸೆ.5ರಂದು ಸಂಜೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಹಾಜಿ ಕಲ್ಲೇಗ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಸಭಾ ಕಾರ್ಯಕ್ರಮಕ್ಕೆ ಮೊದಲು ನಗರದ ದರ್ಬೆ ಪ್ರವಾಸಿ ಮಂದಿರದ ಬಳಿಯಿಂದ ಕಿಲ್ಲೆ ಮೈದಾನದ ತನಕ ಕಾಲ್ನಡಿಗೆ ಜಾಥಾ ನಡೆಯಲಿದೆ. ಜಾಥಾದಲ್ಲಿ ವಿವಿಧ ತಂಡಗಳಿಂದ ದಫ್ ಹಾಗೂ ಇಸ್ಲಾಮಿಕ್ ಕಲಾ ಸಾಹಿತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಜಾಥಾಕ್ಕೆ ಉದ್ಯಮಿ ಖಲಂದರ್ ಈಸ್ಟರ್ನ್ ಚಾಲನೆ ನೀಡಲಿದ್ದಾರೆ. ಉದ್ಯಮಿ ಜುನೈದ್ ಬಿಜೆ ಧ್ವಜ ಸ್ವೀಕಾರ ಮಾಡಲಿದ್ದಾರೆ. ಆಸಿಫ್ ಪರ್ಲಡ್ಕ ಮತ್ತು ಹಾಜಿ ರಫೀಕ್ ಧ್ವಜಾರೋಹಣ ನೆರವೇರಿಸಲಿದ್ದಾರೆ.



ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಸೈಯದ್ ಅಹ್ಮದ್ ಪೂಕೋಯ ತಂಬಳ್ ದುಳಿಗೈಯುವರು. ಜನಪ್ರಿಯ ಫೌಂಡೇಶನ್ ಅಧ್ಯಕ್ಷ ಡಾ.ಅಬ್ದುಲ್‌ ಬಶೀರ್ ವಿ.ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ಎಂ.ಕೆ.ಸಿನಾನ್ ಸಖಾಫಿ ಅಜಿಲಮೊಗರು ಉದ್ಘಾಟಿಸಲಿದ್ದಾರೆ. ಸೈಯದ್ ಅಲಿ ಮಗ್ದಾನಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭ ಹಿರಿಯರಾದ ಹಾಜಿ ಪಿ.ಎ.ಉಸ್ಮಾನ್ ಚೆನ್ನಾರ್ ಸಂಪ್ಯ, ಹಾಜಿ ಎಲ್.ಟಿ.ಅಬ್ದುಲ್ ರಝಾಕ್ ಮತ್ತು ಹಾಜಿ ಇಬ್ರಾಹೀಂ ಸಾಗರ್ ರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ ರಾಜ್ಯ ಸಂಚಾಲಕ ನ್ಯಾಯವಾದಿ ಎಂ.ಪಿ.ಅಬೂಬಕರ್, ಪ್ರಧಾನ ಕಾರ್ಯದರ್ಶಿ ನೌಶಾದ್ ಹಾಜಿ ಬೊಳುವಾರು, ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಈದ್ ಮಿಲಾದ್ ಸಮಿತಿಯ ಅಧ್ಯಕ್ಷ ಅಶ್ರಫ್ ಬಾವು, ಕೋಶಾಧಿಕಾರಿ ಹನೀಫ್ ಬಗ್ಗುಮೂಲೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!