ಉಪ್ಪಿನಂಗಡಿ: ಸರಗಳ್ಳತನ ಆರೋಪಿಯ ಬಂಧನ

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಯಾಡಿ, ಪಡುಬೆಟ್ಟು ಎಂಬಲ್ಲಿ ಜೂ.6ರಂದು ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ತೂಕದ ಚಿನ್ನದ ಸರವನ್ನು, ಬೈಕಿನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಎಳೆದು ಬಲವಂತವಾಗಿ ಕಸಿದುಕೊಂಡು ಹೋದ ಘಟನೆಗೆ ಸಂಬಂಧಿಸಿ
ಉಪ್ಪಿನಂಗಡಿ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸುಳ್ಯ, ಆಲೆಟ್ಟಿ ನಿವಾಸಿ ಅಬ್ದುಲ್ ರೆಹಮಾನ್ (31) ಎಂಬಾತನನ್ನು ನೆಕ್ಕಿಲಾಡಿ ಎಂಬಲ್ಲಿಂದ ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಆರೋಪಿಯಿಂದ ಅಂದಾಜು ರೂ 4,54,000/-ಮೌಲ್ಯದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ ಸೇರಿದಂತೆ, ಒಟ್ಟು 5,05,000 ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದ್ದು, ಸದ್ರಿ ಬೈಕ್ ಗೆ ಸಂಬಂಧಿಸಿ ಮೈಸೂರು ನಗರದ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ ಎಂದು ತಿಳಿದು ಬಂದಿದೆ.
ಆರೋಪಿಯ ಪತ್ತೆಕಾರ್ಯದಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಅರುಣ್ ನಾಗೇಗೌಡರವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್ ರವರ ನೇತೃತ್ವದಲ್ಲಿ, ಉಪ್ಪಿನಂಗಡಿ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಕಾರ್ಯಚರಣೆ ನಡೆಸಿತ್ತು.