ಧರ್ಮಸ್ಥಳ: ಆನೆ ಮಾವುತ, ಸಹೋದರಿಯ ಕೊಲೆ ಪ್ರಕರಣ, ಮರುತನಿಖೆಗೆ ಆಗ್ರಹಿಸಿ ಎಸ್.ಐ.ಟಿಗೆ ದೂರು
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪೂರ್ಜೆ ಬೈಲು ಎಂಬಲ್ಲಿ 13
ವರ್ಷಗಳ ಹಿಂದೆ ನಡೆದ ಆನೆ ಮಾವುತ ನಾರಾಯಣ ಸಫಲ್ಯ ಮತ್ತು ಅವರ ಸಹೋದರಿ ಯಮುನಾ ಎಂಬವರ ಭೀಕರ ಹತ್ಯೆ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ಮೃತರ ಕುಟುಂಬಸ್ಥರು ವಿಶೇಷ ತನಿಖಾ ತಂಡಕ್ಕೆ ಆ.18ರಂದು ದೂರು ನೀಡಿದ್ದಾರೆ.
ಕೊಲೆಯಾದ ನಾರಾಯಣರ ಮಕ್ಕಳಾದ ಗಣೇಶ ಮತ್ತು ಭಾರತಿ ಬೆಳ್ತಂಗಡಿಯಲ್ಲಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಕಚೇರಿಗೆ ಆಗಮಿಸಿ ಈ ಬಗ್ಗೆ ದೂರು ನೀಡಿದ್ದಾರೆ. ಈ ಕೊಲೆಯ ಬಗ್ಗೆ 2013ರ ನವೆಂಬರ್ 5ರಂದು ಅಂದಿನ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಎಸ್‌ಐಟಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದು, ಈ ಹಿಂದೆ ಎಸ್ಪಿಗೆ ಸಲ್ಲಿಸಿದ್ದ ದೂರಿನ ಪ್ರತಿಯನ್ನೂ ಲಗತ್ತಿಸಿದ್ದಾರೆ ಎಂದು ತಿಳಿದು ಬಂದಿದೆ.