ಕರಾವಳಿರಾಜಕೀಯ

ಚುನಾವಣೆಯಲ್ಲಿ ಓಟು ಕಳ್ಳತನ ನಡೆದಿರುವುದು ಸತ್ಯ: ಅಮಳ ರಾಮಚಂದ್ರ



ಪುತ್ತೂರು: ಕಾಂಗ್ರೆಸ್‌ನವರು ವೋಟು ಕಳ್ಳತನವಾಗುತ್ತಿದೆ ಎಂದು ಆಯೋಗವನ್ನು ಪ್ರಶ್ನೆ ಮಾಡಿದರೆ ಅದಕ್ಕೆ ಬಿಜೆಪಿ ಉತ್ತರ ಕೊಡುವುದಾದರೆ ಇವರಿಬ್ಬರ ನಡುವೆ ಒಪ್ಪಂದ ಇರುವುದು ಸ್ಪಷ್ಟವಾಗಿದ್ದು ಇದು ದೇಶದ ಪ್ರಜಾಪ್ರಬುತ್ವಕ್ಕೆ ಅತ್ಯಂತ ಮಾರಕವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಆರೋಪ ಮಾಡಿದರು.


ಇಂದು ಪುತ್ತೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲೆಲ್ಲ ಅಕ್ರಮ ನಡೆದಿದೆ, ಎಷ್ಟು ಮಂದಿ ಕಳ್ಳ ವೋಟು ಹಾಕಿದ್ದಾರೆ, ಎಷ್ಟು ಕ್ಷೇತ್ರದಲ್ಲಿ ಈ ವ್ಯವಹಾರ ನಡೆದಿದೆ ಎಂಬುದನ್ನು ಇಂಚು ಇಂಚಾಗಿ ರಾಹುಲ್ ಗಾಂಧಿ ದೇಶದ ಮುಂದಿಟ್ಟಿದ್ದಾರೆ. ರಾಹುಲ್ ಗಾಂಧಿಯವರ ಆರೋಪದ ಬೆನ್ನಲ್ಲೇ ದೇಶದ ಕೆಲವು ಮಾಧ್ಯಮಗಳು ಇದರ ಬಗ್ಗೆ ಸ್ವಯಂ ಪರಿಶೀಲನೆ ಮಾಡಿದ್ದು ಆಗ ರಾಹುಲ್ ಮಾಡಿದ ಆರೋಪ ಸತ್ಯ ಎಂದು ಸಾಬೀತಾಗಿದೆ. ರಾಹುಲ್ ಮಾಡಿದ ಆರೋಪವನ್ನು ಒಪ್ಪಿಕೊಳ್ಳಲು ಚುನಾವಣಾ ಆಯೋಗ ಸಿದ್ದವಿಲ್ಲ, ಆಯೋಗ ಸ್ಪಷ್ಟನೆ ನೀಡುವ ಬದಲು ಅದು ಬಿಜೆಪಿ ಮೂಲಕ ಉತ್ತರ ಕೊಡಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ದೇಶದ ಚುನಾವಣಾ ಆಯೋಗ ದೇಶದ ಪ್ರಜೆಗಳ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದೆ. ಕೇಂದ್ರದ ಬಿಜೆಪಿ ಸರಕಾರದ ಅಣತಿಯಂತೆ ಕಾರ್ಯಚರಿಸುತ್ತಿದೆ. ಬಿಜೆಪಿಯನ್ನು ಗೆಲ್ಲಿಸಲು ಎಲ್ಲೆಲ್ಲಿ ಹೆಚ್ಚುವರಿ ವೋಟುಗಳ ಅಗತ್ಯವೋ ಅಲ್ಲಿಗೆಲ್ಲಾ ಆಯೋಗ ನಕಲಿ ಮತಗಳನ್ನು ಸೃಷ್ಟಿಸಿ ಬಿಜೆಪಿಯನ್ನು ಗಲ್ಲಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಿದರು.



ದಾಖಲೆ ಯಾಕೆ ಕೊಡಬೇಕು?
ರಾಹುಲ್ ಚುನಾವಣಾ ಆಯೋಗದ ವಿರುದ್ದ ಮಾಡಿರುವ ಆರೋಪಕ್ಕೆ ದಾಖಲೆ ಕೊಡಿ ಎಂದು ಆಯೋಗ ರಾಹುಲ್ ಅವರನ್ನು ಕೇಳುತ್ತಿದೆ. ಚುನಾವಣಾ ಆಯೋಗ ಕೊಟ್ಟಿರುವ ದಾಖಲೆಗಳನ್ನೇ ಮುಂದಿಟ್ಟು ರಾಹುಲ್ ಗಾಂಧಿಯವರು ಈ ಆರೋಪವನ್ನು ಮಾಡಿದ್ದಾರೆ ಎಂದ ಅಮಳ ರಾಮಚಂಧ್ರ ಅವರು ಚುನಾವಣಾ ಆಯೋಗ ಬಿಜೆಪಿ ವಕ್ತಾರರಾಗಿ ಕೆಲಸ ಮಾಡುತ್ತಿದೆ. ಕಳ್ಳ ವೋಟು ಪಡೆದು ಅಧಿಕಾರಕ್ಕೇರಿದ ನರೇಂದ್ರ ಮೋದಿಯವರು ಆ ಹುದ್ದೆಗೆ ರಾಜಿನಾಮೆ ಕೊಡುವ ಮೂಲಕ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಗೌರವ ಕೊಡುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು. ಈಗ ಸುಪ್ರಿಂಕೋರ್ಟಿನ ಮೇಲೆ ಮಾತ್ರ ದೇಶದ ಜನತೆಗೆ ನಂಬಿಕೆ ಉಳಿದಿದೆ. ಸಿಬಿಐ, ಐ.ಟಿ, ಇ ಡಿ, ಕೆಲವೊಂದು ಮಾಧ್ಯಮ ಎಲ್ಲವನ್ನೂ ಬಿಜೆಪಿ ಖರೀದಿ ಮಾಡಿದೆ ಅವೆಲ್ಲವೂ ಬಿಜೆಪಿ ಅಥವಾ ಮೋದಿಯವರ ಅಣತಿಯಂತೆ ನಡೆಯುತ್ತಿದೆ. ಇದು ದೇಶಕ್ಕೆ ಮಾರಕವಾದ ಸಂಗತಿಯಾಗಿದೆ. ಇದೇ ರೀತಿ ಮುಂದುವರೆದರೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಜನ ಬೀದಿಗಿಳಿಯುವ ಕಾಲ ದೂರವಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!