ಪುತ್ತೂರು: ಕೆಯ್ಯೂರಿಗೆ ಚಡ್ಡಿ ಗ್ಯಾಂಗ್ ಬಂದದ್ದು ನಿಜವೇ..?
ಪುತ್ತೂರು: ಕೆಯ್ಯೂರಿನಲ್ಲಿ ಚಡ್ಡಿ ಗ್ಯಾಂಗ್ ಪ್ರತ್ಯಕ್ಷಗೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿ ಗ್ರಾಮಸ್ಥರು ಆತಂಕಕ್ಕೆ ಕಾರಣವಾದ ಘಟನೆ ನಡೆದಿದ್ದು ನಂತರ ನಡೆದ ಬೆಳವಣಿಗೆಯಲ್ಲಿ ಇದೊಂದು ಕಟ್ಟುಕಥೆ ಎನ್ನುವುದು ಬಯಲಾಗಿದೆ.

ರಾತ್ರಿ ಮನೆಗೆ ಚಡ್ಡಿ ಗ್ಯಾಂಗ್ ದರೋಡೆಕೋರರು ಬಂದಿದ್ದಾರೆ. ತಲವಾರು ತೋರಿಸಿ ಬೆದರಿಸಿ, ಹಣ, ಒಡವೆ ಕೇಳಿದ್ದಾರೆ. ಗ್ಯಾಂಗ್‌ನಲ್ಲಿ ನಾಲ್ವರು ಇದ್ದರು ನಾನು ಕಿಟಕಿಯ ಮೂಲಕ ಅವರ ಫೋಟೋ ತೆಗೆದಿದ್ದೇನೆ ಎಂದೇಳಿಕೊಂಡು ಮಹಿಳೆಯೋರ್ವರು ಆ ಫೋಟೋವನ್ನು ಇತರರಿಗೆ ಕಳಿಸಿ ಚಡ್ಡಿ ಗ್ಯಾಂಗ್ ದರೋಡೆಕೋರರೇ ಬಂದಿದ್ದಾರೆ ಎಂದಿದ್ದರು. ಇದು ಮಾಧ್ಯಮದಲ್ಲಿ ವರದಿಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ರವಿ.ಬಿ.ಎಸ್.ರವರು ಮಹಿಳೆಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಇದೊಂದು ಕಟ್ಟು ಕಥೆ ಆಗಿದ್ದು ಮಹಿಳೆ ಕಳಿಸಿದ ಫೋಟೋಗಳು 2 ವರ್ಷಗಳ ಹಿಂದೆ ಮಳೆಯಾಲಂನ ಮನೋರಮಾ ನ್ಯೂಸ್‌ನಲ್ಲಿ ಪ್ರಸಾರಗೊಂಡ ಕೊಟ್ಟಾಯಂನಲ್ಲಿ ನಡೆದ ಒಂದು ಸ್ಟೋರಿಯಲ್ಲಿ ಬರುವ ಫೋಟೋಗಳಾಗಿವೆ ಎಂಬುವುದು ತಿಳಿದು ಬಂದಿದೆ.
ಡಿವೈಎಸ್‌ಪಿ ಅರುಣ್ ನಾಗೇಗೌಡ, ಸಂಪ್ಯ ಠಾಣಾ ತನಿಖಾ ವಿಭಾಗದ ಎಎಸ್‌ಐ ಸುಷ್ಮಾ ಭಂಡಾರಿ ಹಾಗೂ ಸಿಬ್ಬಂದಿಗಳು ಬಂದು ಪರಿಶೀಲನೆ ನಡೆಸಿದ್ದಾರೆ.
ಕೇರಳದಿಂದ ಬಂದ ಕುಟುಂಬ
ಚಡ್ಡಿ ಗ್ಯಾಂಗ್‌ನ ಕಥೆ ಕಟ್ಟಿದ ಮಹಿಳೆ ಮೂಲತಃ ಕೇರಳ ಮೂಲದವರಾಗಿದ್ದಾರೆ. ಇವರು ತನ್ನ ಪತಿ ಹಾಗೂ ಮಗುವಿನೊಂದಿಗೆ ಕೆಯ್ಯೂರು ಗ್ರಾಮದ ಸಣಂಗಳದಲ್ಲಿ ಬಾಡಿಗೆ ಮನೆಯಲ್ಲಿ ಕಳೆದ 40 ದಿನಗಳಿಂದ ವಾಸವಿದ್ದಾರೆ ಎನ್ನಲಾಗಿದೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ ವೇಳೆಯೂ ಮಹಿಳೆ, ನನ್ನ ಮನೆಗೆ ದರೋಡೆಕೋರರು ಬಂದಿದ್ದಾರೆ ಎಂದೇ ಹೇಳಿದ್ದರು ಎನ್ನಲಾಗಿದೆ. ಈ ಬಗ್ಗೆ ಮಹಿಳೆ ಯಾವುದೇ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ.
ಗ್ರಾಮದ ಮನೆಯೊಂದಕ್ಕೆ ಚಡ್ಡಿ ಗ್ಯಾಂಗ್ ದರೋಡೆಕೋರರು ಬಂದಿದ್ದಾರೆ ಎಂದು ಅವರು ಫೋಟೋ ಹಂಚಿಕೊಂಡಿದ್ದು ಈ ಬಗ್ಗೆ ಪೊಲೀಸ್ ತನಿಖೆ ವೇಳೆ ಇದೊಂದು ಕಟ್ಟು ಕಥೆ ಎಂದು ತಿಳಿದು ಬಂದಿದೆ. ಕೆಯ್ಯೂರು ಗ್ರಾಮಕ್ಕೆ ಯಾವುದೇ ಚಡ್ಡಿ ಗ್ಯಾಂಗ್‌ನ ದರೋಡೆಕೋರರು ಬಂದಿಲ್ಲ. ಯಾರೂ ಕೂಡ ಭಯಪಡುವ ಅಗತ್ಯವಿಲ್ಲ ಎಂದು ಕೆಯ್ಯೂರು ಗ್ರಾಪಂ ಶರತ್ ಕುಮಾರ್ ಮಾಡಾವು ತಿಳಿಸಿದ್ದಾರೆ.