ಕರಾವಳಿರಾಜ್ಯ

ಗ್ಯಾಸ್ ಗೀಸರ್ ಬಳಕೆ ನಿಜಕ್ಕೂ ಅಪಾಯಕಾರಿಯೇ?!

ಗ್ಯಾಸ್ ಗೀಸರ್ ಬಳಕೆಯಲ್ಲಿ ಸಾವು ಸಂಭವಿಸುವ ಪ್ರಕರಣಗಳು ನಡೆದಾಗಲೆಲ್ಲಾ ಗ್ಯಾಸ್ ಗೀಸರ್ ನ ಉಪಯೋಗದ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತದೆ.
ನಗರ ಪ್ರದೇಶಗಳಲ್ಲಿ ಕಟ್ಟಿಗೆ ಒಲೆಗಳ ಬಳಕೆ ಅಸಾಧ್ಯವಾದಾಗ, ದುಬಾರಿ ವಿದ್ಯುತ್ ದರದ ಕಾರಣದಿಂದ ಬಹುತೇಕರು ಸುಲಭವಾಗಿ ನೀರು ಕಾಯಿಸಲು ಆಯ್ದುಕೊಂಡ ಮಾರ್ಗವಾಗಿತ್ತು ಗ್ಯಾಸ್ ಗೀಸರ್ ಬಳಕೆ.
ವಿದ್ಯುತ್ ಗೀಸರ್ ನಲ್ಲಿ ನೀರು ಬಿಸಿಯಾಗಲು ಸಮಯ ತಗೊಂಡರೆ, ಗ್ಯಾಸ್ ಗೀಸರ್ ನಲ್ಲಿ ಕಾಯಬೇಕಾದ ಅಗತ್ಯವಿಲ್ಲ.
ಇಂದು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಗಳಲ್ಲೂ ಗ್ಯಾಸ್ ಗೀಸರ್ ಸರ್ವೇ ಸಾಮಾನ್ಯವಾಗಿಬಿಟ್ಟಿದೆ.


ಅದು ಬಹಳಷ್ಟು ಉಪಕಾರಿಯೂ ಹೌದು. ಆದರೆ ಅದರ ಬಳಕೆಯ ಕುರಿತು ಸರಿಯಾದ ತಿಳುವಳಿಯಿಲ್ಲದ ಕಾರಣದಿಂದಾಗಿ ಕೆಲವೊಂದು ಊಹಾಪೋಹಗಳಿಂದಾಗಿ ಇಂದು ಗ್ಯಾಸ್ ಗೀಸರ್ ಬಳಸಲು ಭಯ ಪಡುವಂತಹ ಸನ್ನಿವೇಶ ಸೃಷ್ಟಿಯಾಗಿಬಿಟ್ಟಿದೆ.
ಗ್ಯಾಸ್ ಗೀಸರ್ ಗೆ ಇಂಧನವಾಗಿ ಬಳಕೆಯಾಗುವುದು ಎಲ್.ಪಿ.ಜಿ. ಇದು ಆಮ್ಲಜನಕ ಹೆಚ್ಚಾಗಿರುವ ಕಡೆ ಉರಿದು ಕಾರ್ಬನ್ ಡೈ ಆಕ್ಸೈಡ್ ಆಗುತ್ತದೆ. ಆದರೆ ಆಮ್ಲಜನಕದ ಕೊರತೆಯಾದರೆ ಮಾತ್ರ ಇದು ಪೂರ್ಣವಾಗಿ ಉರಿಯದೆ ಕಾರ್ಬನ್ ಮಾನಾಕ್ಸೈಡ್ ಆಗಿ ಬದಲಾಗಿ, ವಿಷಕಾರಿಯಾಗಿ ಪರಿಣಮಿಸುತ್ತದೆ.
ಇದನ್ನು ಸೇವಿಸಿದಾಗ ಸಾವು ಸಂಭವಿಸುತ್ತದೆ.
ಪ್ರತಿಯೊಂದು ಗ್ಯಾಸ್ ಗೀಸರ್ ಗಳಲ್ಲೂ “ಉತ್ತಮವಾಗಿ ಗಾಳಿ ಇರುವ ಕಡೆಗಳಲ್ಲಿ ಮಾತ್ರ ಬಳಸಬೇಕು” ಎಂಬ ಸೂಚನೆ ಕೂಡ ಬರೆದಿರುತ್ತದೆ!
ಆದರೆ ಇಂದು ಬಹುತೇಕರು ಮಾಡುವ ತಪ್ಪುಗಳೆಂದರೆ ಗ್ಯಾಸ್ ಗೀಸರ್ ಇರುವ ಬಾತ್ರೂಮಿನ ಕಿಟಕಿ ಬಾಗಿಲುಗಳನ್ನು ಸಂಪೂರ್ಣವಾಗಿ ಮುಚ್ಚಿ ಸ್ನಾನ ಮಾಡುತ್ತಿರುವುದರಿಂದ ಇಂತಹ ಘಟನೆಗಳು ಪುನಾರಾವರ್ತನೆಗಳಾಗುತ್ತಿರುವುದು.
ಆದುದರಿಂದ ಗ್ಯಾಸ್ ಗೀಸರ್ ಗಳು ಬಳಕೆ ಮಾಡುವವರು ಯಾವುದೇ ಕಾರಣಕ್ಕೂ ಕಿಟಕಿ ಮುಚ್ಚಿ ಗ್ಯಾಸ್ ಗೀಸರ್ ಆನ್ ಮಾಡಲೇಬಾರದು.
ಒಂದು ವೇಳೆ ಕಿಟಕಿ ಮುಚ್ಚಲೇಬೇಕು ಎಂದಿದ್ದರೆ ಸ್ನಾನಕ್ಕೆ ಮುಂಚೆಯೇ ಗ್ಯಾಸ್ ಗೀಸರ್ ನಿಂದ ನೀರು ಸಂಗ್ರಹಿಸಿಡಬೇಕು. ಆ ಸಂದರ್ಭದಲ್ಲಿ ಬಾಗಿಲು ಅಥವಾ ಕಿಟಕಿ ತೆರೆದಿಡಬೇಕು.
ಯಾವುದೇ ವಸ್ತುಗಳ ಖರೀದಿ ಮಾಡುವಾಗಲೂ ಅದರ ಬಳಕೆಯ ಕುರಿತಾದ ಸಂಪೂರ್ಣ ತಿಳುವಳಿಕೆ ಹೊಂದಿದ್ದರೆ ಖಂಡಿತವಾಗಿಯೂ ಅದರ ಅಪಾಯದ ಕುರಿತು ತಿಳುವಳಿಕೆ ಪಡೆಯಲು ಸಾಧ್ಯವಿದೆ.
ಇನ್ನು ಕೆಲವರು ಗ್ಯಾಸ್ ಗೀಸರ್ ಮನೆಯ ಹೊರಗಡೆಯೇ ಇಡಬೇಕು ಅನ್ನುವ ವಾದ ಮಾಡುವವರೂ ಇದ್ದಾರೆ.
ಮನೆಯ ಹೊರಗಡೆ ಇಡುವ ಗ್ಯಾಸ್ ಗೀಸರ್ ನೊಳಗೆ ಹಲ್ಲಿ, ಜೇಡಗಳು ಕೆಲವೊಮ್ಮೆ ಇಲಿಗಳೂ ಹೋಗಿ ಗ್ಯಾಸ್ ಗೀಸರ್ ನೊಳಗಿನ ವಯರ್ ಗಳನ್ನು ತುಂಡರಿಸಿ, ಕೆಲವೊಮ್ಮೆ ನಷ್ಟಗಳನ್ನೂ ಉಂಟು ಮಾಡುತ್ತದೆ.
ಯಾವುದೇ ಕಾರಣಕ್ಕೂ ಬಾತ್ರೂಮಿನ ಕಿಟಕಿಗಳನ್ನು ಮುಚ್ಚದಿರಿ. ಯಾವುದೇ ವಸ್ತುವಾದರೂ ಬಳಕೆ ಗೊತ್ತಿಲ್ಲದಿದ್ದಲ್ಲಿ ಅಪಾಯವೇ ಹೆಚ್ಚು!                                                                                  ✍️ಸ್ನೇಹಜೀವಿ ಅಡ್ಕ     

Leave a Reply

Your email address will not be published. Required fields are marked *

error: Content is protected !!