ಲಾರಾ ವಿಶ್ವ ದಾಖಲೆ ಮುರಿಯದಿರಲು ಕಾರಣ ತಿಳಿಸಿದ ಮುಲ್ಡರ್
ಝಿಂಬಾಬ್ವೆ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ವಿಯಾನ್ ಮುಲ್ಡರ್ ಅಜೇಯ 367 ರನ್ ಬಾರಿಸಿದ್ದರು. ಈ ವೈಯುಕ್ತಿಕ ಸ್ಕೋರ್ ಗೆ ಕೇವಲ 34 ರನ್ ಸೇರ್ಪಡೆಗೊಳಿಸಿದ್ದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ರನ್ ಗಳಿಸಿದ ವಿಶ್ವ ದಾಖಲೆ ಮುಲ್ಡರ್ ಪಾಲಾಗುತ್ತಿತ್ತು. ಆದರೆ ದಾಖಲೆ ಮಾಡುವ ಅವಕಾಶ ಇದ್ದಾಗಲೇ ದಿಢೀರ್ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿ ಮುಲ್ಡರ್ ಅಚ್ಚರಿ ಮೂಡಿಸಿದರು. ಇದು ವಿಶ್ವ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಮತ್ತು ಆಶ್ಚರ್ಯಕ್ಕೆ ಕಾರಣವಾಗಿತ್ತು. ಇದೀಗ ಈ ನಿರ್ಧಾರದ ಬಗ್ಗೆ ವಿಯಾನ್ ಮುಲ್ಡರ್ ಮಾತನಾಡಿದ್ದಾರೆ. ಲೆಜೆಂಡ್ ಬ್ರಿಯಾನ್ ಲಾರಾ ಅವರ ವಿಶ್ವ ದಾಖಲೆಯನ್ನು ಮುರಿಯದಿರಲು ಕಾರಣ ಏನೆಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಈ ಪಂದ್ಯದ 2ನೇ ದಿನದಾಟದ ಮುಕ್ತಾಯದ ಬಳಿಕ ಮಾತನಾಡಿದ ವಿಯಾನ್ ಮುಲ್ಡರ್, ” ನಾನು ಬ್ಯಾಟಿಂಗ್ ಮಾಡುತ್ತಿದ್ದಾಗ, ನಾವು ತುಂಬಾ ರನ್ ಗಳಿಸಿದ್ದೇವೆ ಎಂದು ಭಾವಿಸಿದೆ. ಹೀಗಾಗಿ ಡಿಕ್ಲೇರ್ ಘೋಷಿಸಿ ಬೌಲಿಂಗ್ ಮಾಡುವುದು ಉತ್ತಮ ಎಂದೆನಿಸಿತು. ಇದರ ಹೊರತಾಗಿ ನನಗೆ ಬ್ರಿಯಾನ್ ಲಾರಾ ಅವರ ದಾಖಲೆ ಮುರಿಯಬೇಕೆಂದು ಅನಿಸುತ್ತಿರಲಿಲ್ಲ. ಏಕೆಂದರೆ ಬ್ರಿಯಾನ್ ಲಾರಾ ಒಬ್ಬ ಉತ್ತಮ ಆಟಗಾರ. ಆ ಮಟ್ಟದ ಆಟಗಾರ ಈ ದಾಖಲೆಯನ್ನು ಕಾಯ್ದುಕೊಳ್ಳುವುದು ಸೂಕ್ತ. ಟೆಸ್ಟ್ ಪಂದ್ಯವೊಂದರಲ್ಲಿ 400 ರನ್ಗಳ ದಾಖಲೆ ಅವರ ಹೆಸರಿನಲ್ಲಿಯೇ ಇರಲಿ ಎಂದು ಭಾವಿಸಿದೆ. ಹೀಗಾಗಿ ನನ್ನ ದಾಖಲೆಯನ್ನು ಪಕ್ಕಕ್ಕಿಟ್ಟು ಇನಿಂಗ್ಸ್ ಡಿಕ್ಲೇರ್ ಘೋಷಿಸಿದೆ ಎಂದು ಮುಲ್ಡರ್ ಹೇಳಿದ್ದಾರೆ. ಇನ್ನೊಮ್ಮೆ ಕೂಡ ನನಗೆ ಬ್ರಿಯಾನ್ ಲಾರಾ ಅವರ ವಿಶ್ವ ದಾಖಲೆ ಮುರಿಯುವ ಅವಕಾಶ ಸಿಕ್ಕರೂ, ಖಂಡಿತವಾಗಿಯೂ ನಾನು ಇದನ್ನೇ ಮಾಡುವೆ. ಏಕೆಂದರೆ ಬ್ರಿಯಾನ್ ಲಾರಾ ಒಬ್ಬ ದಂತಕಥೆ. ಅವರು ಈ ದಾಖಲೆಯನ್ನು ಕಾಯ್ದುಕೊಳ್ಳಲು ಅರ್ಹರು. ಹೀಗಾಗಿ ನನಗೆ ಆ ವಿಶ್ವ ದಾಖಲೆಯನ್ನು ಮುರಿಯುವ ಯಾವುದೇ ಆಸೆಯಿಲ್ಲ ಎಂದು ವಿಯಾನ್ ಮುಲ್ಡರ್ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ವೈಯುಕ್ತಿಕ ಮೊತ್ತ ಗಳಿಸಿದ ವಿಶ್ವ ದಾಖಲೆ ಬ್ರಿಯಾನ್ ಲಾರಾ ಹೆಸರಿನಲ್ಲಿದೆ. 2004 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಜೇಯ 400 ರನ್ಗಳಿಸಿ ವೆಸ್ಟ್ ಇಂಡೀಸ್ ದಾಂಡಿಗ ವಿಶ್ವ ದಾಖಲೆ ನಿರ್ಮಿಸಿದ್ದರು.