ಮಂಗಳೂರು ಪೊಲೀಸರ ಯಶಸ್ವೀ ಕಾರ್ಯಾಚರಣೆ: 5 ಲಕ್ಷ ಮೌಲ್ಯದ ಗಾಂಜಾದೊಂದಿಗೆ ಐದು ಮಂದಿ ಆರೋಪಿಗಳ ಬಂಧನ
ಮಂಗಳೂರು: ಮಾದಕ ದ್ರವ್ಯ ಮಾರಾಟದ ವಿರುದ್ಧ ಪ್ರಮುಖ ಕಾರ್ಯಾಚರಣೆಯಲ್ಲಿ, ಮಂಗಳೂರು ನಗರ ಪೊಲೀಸರು ಮಂಗಳೂರಿನ ಪಡುಶೆಡ್ಡೆಯಲ್ಲಿ ಗಾಂಜಾ ಹೊಂದಿದ್ದ ಮತ್ತು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಐದು ಜನರನ್ನು ಬಂಧಿಸಿದ್ದಾರೆ. ಸೆನ್ ಪೊಲೀಸ್ ಠಾಣೆಗೆ ದೊರೆತ ಸುಳಿವು ಆಧರಿಸಿ ಆರೋಪಿಗಳನ್ನು ಬಂಧನ ಮಾಡಲಾಗಿದೆ.

ಆರೋಪಿಗಳನ್ನು ಬಿಕರ್ನಕಟ್ಟೆ ಆಡು ಮರೋಳಿ ನಿವಾಸಿ ರಾಜೇಶ್ ತಾರಾನಾಥ್ ಎಂಬವರ ಪುತ್ರ ತುಷಾರ್ ಅಲಿಯಾಸ್ ಸೋನು (21), ನಾಗುರಿ ನಿವಾಸಿ ಬಾಲಕೃಷ್ಣ ಶೆಟ್ಟಿ ಎಂಬವರ ಪುತ್ರ ಧನ್ವಿ ಶೆಟ್ಟಿ (20), ಜಲ್ಲಿಗುಡ್ಡೆ ನಿವಾಸಿ ಶೀತಲ್ ಕುಮಾರ್ ಎಂಬವರ ಪುತ್ರ ಸಾಗರ್ ಕರ್ಕೇರ (19), ಶಕ್ತಿನಗರ ನಿವಾಸಿ ರಾಜು ಥಾಪ ಅವರ ಪುತ್ರ ವಿಕಾಸ್ ಥಾಪ ಅಲಿಯಾಸ್ ಪುಚ್ಚಿ (23) ಹಾಗೂ ಅಳಕೆ, ಕಂಡೆಟ್ಟು ನಿವಾಸಿ ದಿವಂಗತ ಹರೀಶ್ ಕಾಮತ್ ಅವರ ಪುತ್ರ ವಿಘ್ನೇಶ್ ಕಾಮತ್ (24) ಬಂಧಿತರು.
ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಪಡುಶೆಡ್ಡೆ ಗ್ರಾಮದ ಹಾಲಾಡಿಯಲ್ಲಿ ದಾಳಿ ನಡೆಸಿ 5.2 ಲಕ್ಷ ರೂ. ಮೌಲ್ಯದ ಒಟ್ಟು 5.759 ಕೆಜಿ ಗಾಂಜಾವನ್ನು ವಶಪಡಿಸಿಕೊಂಡರು. ದಾಳಿ ನಡೆಸಿದಾಗ ಆರೋಪಿಗಳು ಮಾರಾಟಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಗಾಂಜಾವನ್ನು ಸಿದ್ಧಪಡಿಸುತ್ತಿದ್ದರು ಎಂದು ವರದಿಯಾಗಿದೆ.
ಗಾಂಜಾ ಜೊತೆಗೆ, ಪೊಲೀಸರು ಆರು ಮೊಬೈಲ್ ಫೋನ್‌ಗಳು ಮತ್ತು ಕೃತ್ಯಕ್ಕೆ ಬಳಸಲಾದ ದ್ವಿಚಕ್ರ ವಾಹನವನ್ನು ಸಹ ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಐವರು ಆರೋಪಿಗಳು ಮಂಗಳೂರು ನಗರದಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಣ್ಣ ಪ್ಯಾಕೆಟ್‌ಗಳಲ್ಲಿ ಗಾಂಜಾ ಮಾರಾಟ ಮಾಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪ್ರತಿ ಪ್ಯಾಕೆಟ್ ಅನ್ನು 1,000 ರೂ.ಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ.
ಮಂಗಳೂರು ಕೇಂದ್ರ ಅಪರಾಧ ಠಾಣೆಯಲ್ಲಿ ಅಪರಾಧ ಸಂಖ್ಯೆ 31/2025 ರ ಅಡಿಯಲ್ಲಿ NDPS ಕಾಯ್ದೆಯ ಸೆಕ್ಷನ್ 8(ಸಿ) ಮತ್ತು 20(ಬಿ)(ii)(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಮಾದಕ ವ್ಯಸನಿಯೊಬ್ಬರ ಪೋಷಕರು ನೀಡಿದ ಮಾಹಿತಿ ಆಧರಿಸಿ ನಾವು ಕ್ರಮ ಕೈಗೊಂಡಿದ್ದೇವೆ, ಒಬ್ಬರು ಕೊಟ್ಟ ದೂರಿನಿಂದ 200 ಜನರಿಗೆ ಡ್ರಗ್ ಪೂರೈಕೆಯಾಗುವುದಕ್ಕೆ ತಡೆಯಾಗಿದೆ, 10 ಜನರು ದೂರು ಕೊಟ್ಟರೆ 2 ಸಾವಿರ ಜನಕ್ಕೆ ಡ್ರಗ್ ಸಿಗದಂತೆ ಮಾಡಬಹುದು,100 ಜನರು ದೂರು ಕೊಟ್ಟರೆ ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಮಾದಕ ವಸ್ತು ಮುಕ್ತ ಮಾಡಬಹುದು ಎಂದರು.