ತಲ್ವಾರ್ ಹಿಡಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆರೋಪ: ಇಬ್ಬರ ಬಂಧನ
ಮಂಗಳೂರು: ತಲ್ವಾರ್ ಹಿಡಿದು ನೃತ್ಯದ ರೀಲ್ಸ್ ಮಾಡಿದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಬಂದರ್ ನಿವಾಸಿ ಅಮೀರ್ ಸುಹೇಲ್ (28), ಕಾವೂರು ಉರುಂದಾಡಿಗುಡ್ಡೆಯ ಸುರೇಶ್ (29) ಬಂಧಿತ ಆರೋಪಿಗಳು.
ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಖಾತೆಯಲ್ಲಿ “Suresh psy” ಎಂಬ ಹೆಸರಿನ ಫೇಸ್ಬುಕ್ ಖಾತೆ ಹೊಂದಿರುವ ಸುರೇಶ್ ಎಂಬಾತ ಡಿ.13ರಂದು ತನ್ನ ಫೇಸ್ಬುಕ್ ಖಾತೆಯಲ್ಲಿ ಅಮೀರ್ ಸುಹೇಲ್ ತಲ್ವಾರ್ ಹಿಡಿದು ಹಾಡಿನೊಂದಿಗೆ ಡ್ಯಾನ್ಸ್ ಮಾಡಿದ ವೀಡಿಯೊ ಮೇಲೆ VIBES ಮತ್ತು ಹಾರ್ಟ್ ಗುರುತಿನ ಚಿಹ್ನೆಯೊಂದಿಗೆ ಸ್ಟೋರಿಗೆ ಹಾಕಿ, ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ವರ್ತಿಸಿರುವುದಾಗಿ ಆರೋಪಿಸಲಾಗಿತ್ತು.
ಈ ಸಂಬಂಧ ಅಮೀರ್ ಸುಹೇಲ್ ಹಾಗೂ ಸುರೇಶ್ ಎಂಬಾತನ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿ.13ರಂದು ಇಬ್ಬರು ಆರೋಪಿಗಳನ್ನು ಅವರು ರೀಲ್ಸ್ ಮಾಡಲು ಬಳಸಿದ ತಲ್ದಾರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಬಳಸಿದ ಮೊಬೈಲ್ ಫೋನ್ ಗಳ ಸಹಿತ ದಸ್ತೆಗಿರಿ ಮಾಡಲಾಗಿದೆ.
ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಕೆ ಮಾರ್ಗದರ್ಶನದಲ್ಲಿ ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ ಇವರೊಂದಿಗೆ ಕಾವೂರು ಠಾಣಾ ಸಿಬ್ಬಂದಿ ಸಂಭಾಜಿ ಕದಂ, ಕೆಂಚನ ಗೌಡ, ಶರಣಪ್ಪ, ರಾಘವೇಂದ್ರ, ರಿಯಾಝ್ ಪಾಲ್ಗೊಂಡಿದ್ದರು.



