ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮಾನತು
ಪುತ್ತೂರು: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅವಕಾಶ ನೀಡಿದ ಆರೋಪದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ ರವರನ್ನು ಅಮಾನತು ಮಾಡಿ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವರು ಆದೇಶ ಹೊರಡಿಸಿದ್ದಾರೆ.
ಜೂ.23ರಂದು ಇದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ರಾಜಕೀಯ ಪಕ್ಷವೊಂದರ ಸಭೆಯನ್ನು ನಡೆಸಲು ಅವಕಾಶ ಕಲ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕರ್ನಾಟಕ ನಾಗರೀಕ ಸೇವಾ ನಡತೆ ನಿಯಮವನ್ನು ಉಲ್ಲಂಘಿಸಿ ಕರ್ತವ್ಯದಲ್ಲಿ ನಿರ್ಲಕ್ಷ್ಯತೆಯನ್ನು ತೋರಿರುವ ಹಿನ್ನೆಲೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್‌ದಾಸ್ ಭಕ್ತ ರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿರವರು ಅಭಿವೃದ್ಧಿ ಅಧಿಕಾರಿರವರಿಗೆ ಕಾರಣ ಕೇಳಿ ನೋಟಿಸು ನೀಡಿದ್ದು, ಆ ನೋಟಿಸಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಿರುವುದು ತನ್ನ ಗಮನಕ್ಕೆ ಬಂದಿರುವುದಿಲ್ಲ ಎಂಬುದಾಗಿ ಸಮಜಾಯಿಷಿಯನ್ನು ನೀಡಿದ್ದರು. ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಅಭಿವೃದ್ಧಿ ಅಧಿಕಾರಿ ಗೋಕುಲ್‌ದಾಸ್ ಭಕ್ತರವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.