ಪುತ್ತೂರಿನಿಂದ ಮಂಗಳೂರಿಗೆ ನಾನ್ ಸ್ಟಾಪ್ ಎಕ್ಸ್‌ಪ್ರೆಸ್ ಬಸ್ ಆರಂಭ: ಶಾಸಕ ಅಶೋಕ್ ರೈ
ಪುತ್ತೂರು: ಪುತ್ತೂರಿನಿಂದ ಮಂಗಳೂರಿಗೆ ನಾನ್ ಸ್ಟಾಪ್ ಸರಕಾರಿ ಬಸ್ ಶೀಘ್ರ ಸಂಚಾರ ಆರಂಭ ಮಾಡಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಶಾಸಕರ ಕಚೇರಿಯಲ್ಲಿ ಸೋಮವಾರ ನಡೆದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಶಾಸಕರು ತನ್ನ ಕಚೇರಿಯಲ್ಲಿ ಪುತ್ತೂರು ವಿಭಾಗದ KSRTC ಅಧಿಕಾರಿಗಳ ಸಭೆಯನ್ನು ಕರೆದು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಬಸ್ ಸಂಚಾರದಲ್ಲಿ ಇರುವ ಲೋಪ ದೋಷಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಮಳೆಗಾಲ ಮತ್ತು ಶಾಲಾ ಪ್ರಾರಂಭದ ದಿನಗಳಾಗಿರುವ ಕಾರಣ ಶಾಲಾ ಮಕ್ಕಳಿಗೆ ಬಸ್ ಇಲ್ಲದೆ ಯಾವುದೇ ತೊಂದರೆಗಳುಂಟಾದಲ್ಲಿ, ಬಸ್ ಕೊರತೆಯಾದಲ್ಲಿ ತನ್ನ ಗಮನಕ್ಕೆ ತರಬೇಕು ಎಂದು ಶಾಸಕರು ತಿಳಿಸಿದರು.
ಪುತ್ತೂರಿನಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್‌ಗೆ ನಾನ್ ಸ್ಟಾಪ್ ಎಕ್ಸ್‌ಪ್ರೆಸ್ ಬಸ್ ಸೇವೆ ಶೀಘ್ರ ಆರಂಭವಾಗಲಿದೆ. ಪ್ರಾರಂಭದಲ್ಲಿ 6 ಬಸ್ಸುಗಳು ಸಂಚಾರ ಆರಂಭಿಸಲಿದೆ. ಪುತ್ತೂರು ಬಸ್ ನಿಲ್ದಾಣದಿಂದ ಹೊರಡುವ ಬಸ್ಸು ಎಲ್ಲೂ ನಿಲುಗಡೆಯಾಗದೆ ನೇರವಾಗಿ ಸ್ಟೇಟ್ ಬ್ಯಾಂಕ್ ನಿಲ್ದಾಣದಲ್ಲೇ ನಿಲುಗಡೆಯಾಗಲಿದೆ. ಈಗ ಇರುವ ಬಸ್ಸು ಅಲ್ಲಲ್ಲಿ ನಿಲುಗಡೆ ಇರುವ ಕಾರಣ ನೇರವಾಗಿ ಮಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಬಸ್ಸು ತಲುಪುವಾಗ ತಡವಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಬಳಿಕ , ಸಾರ್ವಜನಿಕರ ಅನುಕೂಲಕ್ಕೆ ಹೊಸ ಬಸ್ ಸೇವೆಯನ್ನು ಪ್ರಾರಂಭ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಹೊಸ ಎಕ್ಸ್‌ಪ್ರೆಸ್ ಪುತ್ತೂರಿನಿಂದ ಹೊರಟು ಒಂದು ಗಂಟೆಯೊಳಗೆ ಮಂಗಳೂರು ತಲುಪಲಿದೆ. ಇದಕ್ಕಾಗಿ ಹೊಸ ಬಸ್ಸುಗಳು ಬರಲಿದೆ ಎಂದು ಶಾಸಕರು ತಿಳಿಸಿದರು.

ಮಂಗಳೂರಿನಿಂದ ಬಂಟ್ವಾಳ- ಕಲ್ಲಡ್ಕ-ವಿಟ್ಲ -ಪುತ್ತೂರು -ಉಪ್ಪಿನಂಗಡಿ ಮಾರ್ಗವಾಗಿ ಬೆಂಗಳೂರಿಗೆ ಅಂಬಾರಿ ಉತ್ಸವ ಬಸ್ ಸಂಚಾರ ನಡೆಸಲಿದೆ.ಪ್ರತೀ ದಿನ ಈ ಬಸ್ಸು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದು ಇದು ಹವಾನಿಯಂತ್ರಿತ ವ್ಯವಸ್ಥೆಯನ್ನೊಳಗೊಂಡಿರುತ್ತದೆ. ವಿಟ್ಲ ಮೂಲಕ ಬೆಂಗಳೂರಿಗೆ ಸರಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಪ್ರಯಾಣಿಕರಿಂದ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹೊಸ ರೂಟ್ ವ್ಯವಸ್ಥೆಯೂ ಶೀಘ್ರ ಆರಂಭವಾಗಲಿದೆ ಎಂದು ಶಾಸಕರು ತಿಳಿಸಿದರು.
ಪುತ್ತೂರಿಗೆ 326ಮಂದಿ ಚಾಲಕ /ನಿರ್ವಾಹಕರ ನೇಮಕ
ಪುತ್ತೂರಿಗೆ ಹೊಸದಾಗಿ 326 ಮಂದಿ ಚಾಲಕ ಕಂ ನಿರ್ವಾಹಕರನ್ನು ನೇಮಕ ಮಾಡಲಾಗಿದೆ. 500 ಮಂದಿ ಚಾಲಕ ಕಂ ನಿರ್ವಾಹಕರನ್ನು ನೇಮಕ ಮಾಡುವಂತೆ ಸರಕಾರಕ್ಕೆ ಬೇಡಿಕೆ ಇಟ್ಟಿದ್ದು ಈ ಪೈಕಿ ಮೊದಲ ಹಂತದಲ್ಲಿ 326 ಮಂದಿಯನ್ನು ಪುತ್ತೂರಿಗೆ ನೇಮಕ ಮಾಡಲಾಗಿದೆ. ಈ ಮೂಲಕ ಕೊರತೆಯನ್ನು ನೀಗಿಸಲಾಗಿದೆ. ಬಸ್ಸುಗಳ ಸಂಖ್ಯೆಯಲ್ಲಿ ಯಾವುದೇ ಕೊರತೆಯಿಲ್ಲದ ಕಾರಣ ಮುಂದಿನ ದಿನಗಳಲ್ಲಿ ಎಲ್ಲಾ ರೂಟುಗಳಲ್ಲಿಯೂ ಬಸ್ಸು ಹೆಚ್ಚು ಓಡಾಟ ನಡೆಸಲಿದೆ. ಹೊಸದಾಗಿ ನೇಮಕವಾಗಿರುವ ಚಾಲಕ ಮತ್ತು ನಿರ್ವಾಹಕರು ಕನಿಷ್ಠ 5 ವರ್ಷಗಳ ಕಾಲ ಪುತ್ತೂರಿನಲ್ಲಿಯೇ ಕರ್ತವ್ಯವನ್ನು ಮಾಡಬೇಕು ಎಂಬುದು ಸರಕಾರದ ಆದೇಶವಾಗಿರುತ್ತದೆ.
ಬೇಡಿಕೆ ಇರುವ ಕಡೆ ಬಸ್ ಓಡಾಟ:
ಎಲ್ಲೆಲ್ಲಿ ಬಸ್ ಬೇಕು ಎಂಬ ಬೇಡಿಕೆ ಇದೆಯೋ ಅಲ್ಲಿಗೆಲ್ಲಾ ಬಸ್ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಕಳೆದ ಕೆಲವು ತಿಂಗಳಿಂದ ಬಸ್ಸು ಕೊರತೆ ಇರುವ ಬಗ್ಗೆ ಸಾರ್ವಜನಿಕರಿಂದ ಬೇಡಿಕೆ ಇದ್ದು ಅಗತ್ಯ ಬೇಡಿಕೆಗಳನ್ನು ಪರಿಶೀಲಿಸಿ ಅಲ್ಲಿಗೆಲ್ಲಾ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಸಾರ್ವಜನಿಕರ ಬೇಡಿಕೆಗೆ ತಕ್ಕಂತೆ ಪುತ್ತೂರು ತಾಲೂಕಿನಾದ್ಯಂತ ಸರಕಾರಿ ಬಸ್ಸುಗಳ ಓಡಾಟ ನಡೆಯಲಿದೆ.
ಸಭೆಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಅಮಲಿಂಗಯ್ಯ ಹೊಸ ಪೂಜರಿ, ವಿಬಾಗೀಯ ಸಂಚಾರ ನಿಯಂತ್ರಣಾಧಿಕಾರಿ ಜೈಶಂತ್ , ಡಿಪೋ ಮೆನೆಜರ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.