ಕರಾವಳಿ

ಸೈಬ‌ರ್ ವಂಚನೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ



ಮಂಗಳೂರು: ಕಸ್ಟಮ್ಸ್ ಹೆಸರಿನಲ್ಲಿ ಬ್ಯಾಂಕ್ ಗ್ರಾಹಕರ ಖಾತೆಯಿಂದ ಹಣ ಎಗರಿಸುತ್ತಿದ್ದ ಸೈಬರ್ ವಂಚನೆ ಪ್ರಕರಣದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು  ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ತ್ರಿಪುರಾ ತಾಜ್ಯದ ಧಲೈನ ದಮೆನ್ ಜೋಯ್ ರಿಯಾಂಗ್ (27) ಮತ್ತು ಮಣಿಪುರದ ಕಾಂಗ್ರೆನ ಹ್ಯಾಂಗ್‌ರಿಯಲ್ ಕೋಮ್ ಯಾನೆ ಮಂಗ್‌ ತೆ ಅಮೋಶ್ (33) ಬಂಧಿತ ಆರೋಪಿಗಳು.

ಸಾಂದರ್ಭಿಕ ಚಿತ್ರ

ಆರೋಪಿಗಳು 300ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು, 250ಕ್ಕೂ ಹೆಚ್ಚು ಸಿಮ್ ಗಳನ್ನು ಬಳಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಇವರಿಂದ 8 ಮೊಬೈಲ್ ಫೋನ್ ಗಳು, 20 ವಿವಿಧ ಬ್ಯಾಂಕ್ ಗಳ ಡೆಬಿಟ್ ಕಾರ್ಡ್‌ಗಳು, 18 ಪಾಸ್ ಬುಕ್‌ಗಳು, 11 ಚೆಕ್ ಬುಕ್ ಹಾಗೂ ಏಳು ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.


ಅಪರಿಚಿತ ವ್ಯಕ್ತಿ ದೂರುದಾರರಿಗೆ ಕಸ್ಟಮ್ಸ್ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು 7,27,000 ರೂ. ಗಳನ್ನು ಪಡೆದು ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಮಂಗಳೂರು ನಗರ ಸೆನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆ ಕೈಗೊಂಡಾಗ ಸೈಬರ್ ವಂಚನೆ ಪ್ರಕರಣದ ಇಬ್ಬರು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.



ಈ ಪ್ರಕರಣದಲ್ಲಿ ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡು ಪರಿಶೀಲಿಸಿ ಬ್ಯಾಂಕ್ ಖಾತೆದಾರನಾದ ದಮೆನ್ ಜೋಯ್ ರಿಯಾಂಗ್ ಎಂಬಾತನನ್ನು ನ.13ರಂದು ಬೆಂಗಳೂರಿನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು, ಪ್ರಕರಣದ ತನಿಖೆ ಮುಂದುವರಿಸಿದಾಗ ಇನ್ನೊಬ್ಬ ಆರೋಪಿ ಕಾಂಗ್ರೆಕಿನ ಹಾಂಗ್‌ ರಿಯಲ್ ಕೋಮ್ ಪೊಲೀಸರ ಬಲೆಗೆ ಬಿದ್ದನು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಸೆನ್ ಕೈಂ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!