ಕಾಂಗ್ರೆಸ್ ಕಚೇರಿಯ ಆಯುಧ ಪೂಜೆಯಲ್ಲಿ ಸಂಘ ಪರಿವಾರದ ವ್ಯಕ್ತಿಗೆ ಪೌರೋಹಿತ್ಯ ವಿವಾದ: ಸ್ಪಷ್ಟನೆಯೊಂದಿಗೆ ಕ್ಷಮೆ ಯಾಚಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಯುಧ ಪೂಜೆಯಲ್ಲಿ ಕೋಮುವಾದಿ ವ್ಯಕ್ತಿಯನ್ನು ಕರೆಸಿ ಪೌರೋಹಿತ್ಯ ನೀಡಿರುವ ವಿಚಾರದಲ್ಲಿ ಉಂಟಾದ ಆಕ್ರೋಶ, ಗೊಂದಲಗಳಿಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ ವಿಶ್ವನಾಥ್ ರೈ ಸ್ಪಷ್ಟನೆ ನೀಡಿದ್ದು ಅದರ ಜೊತೆಗೆ ಕ್ಷಮೆಯನ್ನೂ ಯಾಚಿಸಿದ್ದಾರೆ.
ಕಾಂಗ್ರೆಸ್ ಕಛೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ಆಯುಧ ಪೂಜೆ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಇದುವರೆಗೆ ಯಾವುದೇ ರೀತಿಯ ಗೊಂದಲಗಳು ಉಂಟಾಗಿರಲಿಲ್ಲ. ದುರಾದೃಷ್ಟವಶಾತ್ ಈ ವರ್ಷ ಒಂದಷ್ಟು ತಪ್ಪು, ಒಂದಷ್ಟು ಗೊಂದಲ ಅನಪೇಕ್ಷಿತವಾಗಿ ನಡೆದು ಹೋಗಿದೆ. ಕಾರ್ಯಕ್ರಮ ಸಂಘಟಸುವ ಜವಾಬ್ದಾರಿಯನ್ನು ಹೊಂದಿದ್ದ ಕೆಲವರ ಅಚಾತುರ್ಯದಿಂದ ಈ ತಪ್ಪು ನಡೆದಿದ್ದರೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ನೆಲೆಯಲ್ಲಿ ಆಗಿ ಹೋದ ಈ ತಪ್ಪಿನ ಹೊಣೆಯನ್ನು ಒಪ್ಪಿಕೊಂಡು, ಶುದ್ಧ ಮನಸ್ಸಿನಿಂದ ಒಪ್ಪಿಕೊಂಡು ನಿರ್ವಂಚನೆಯಿಂದ ತಮ್ಮೆಲ್ಲರ ಕ್ಷಮೆಯನ್ನು ಯಾಚಿಸುತ್ತೇನೆ ಎಂದು ಅವರು ಕ್ಷಮೆ ಯಾಚಿಸಿದ್ದಾರೆ.
ಪಕ್ಷದ ಜವಾಬ್ದಾರಿಯನ್ನು ಹೊಂದಿದ ಕೆಲವರು “ಆಯುಧ ಪೂಜಾ ಸಮಿತಿ” ಎಂಬ ಸಮಿತಿಯನ್ನು ತಮ್ಮೊಳಗೆ ರಚಿಸಿಕೊಂಡಿದ್ದು ಆಯುಧ ಪೂಜೆ ನಡೆಸಲು ನನ್ನ ಒಪ್ಪಿಗೆಯನ್ನು ಕೇಳಿಕೊಂಡಿದ್ದರು. ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನೂ ಮುಕ್ತ ಮನಸ್ಸಿನಿಂದ ಸ್ವಾಗತಿಸಿ ಬೆಂಬಲಿಸುವ ನನ್ನ ಎಂದಿನ ಮನಸ್ಥಿತಿಯಂತೆ ಈ ಕಾರ್ಯಕ್ರಮ ನಡೆಸಲು ನಾನು ಒಪ್ಪಿಗೆ ನೀಡಿದ್ದೆ ಮತ್ತು ಇದು ನಮ್ಮದೇ ಕಾರ್ಯಕ್ರಮ ಎಂಬ ಭಾವನೆಯಿಂದ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತೇನೆ.
ಆ ದಿನದ ಕಾರ್ಯಕ್ರಮದಲ್ಲಿ ಸಂಘಪರಿವಾರದ ಶ್ರೀ ಕೃಷ್ಣ ಉಪಾಧ್ಯಾಯ ಎಂಬ ಕೋಮುವಾದಿ ವ್ಯಕ್ತಿ ಪುರೋಹಿತರಾಗಿ ಆಗಮಿಸುತ್ತಾರೆ ಎಂಬುದು ನನಗೆ ಅರಿವಿರಲಿಲ್ಲ ಮತ್ತು ಇಂತಹವರೇ ಪುರೋಹಿತರಾಗಿ ಬರುತ್ತಾರೆ ಎಂಬ ಮಾಹಿತಿಯನ್ನೂ ಆಯುಧ ಪೂಜಾ ಸಮಿತಿಯವರು ನನಗೆ ನೀಡಿರಲಿಲ್ಲ.
ಶ್ರೀಕೃಷ್ಣ ಉಪಾದ್ಯಾಯ ಎಂಬ ಒಬ್ಬ ಕೋಮು ಪ್ರಚೋದಕ ಭಾಷಣಕಾರನನ್ನು ಕಾಂಗ್ರೆಸ್ ಕಛೇರಿಗೆ ಪೌರೋಹಿತ್ಯಕ್ಕಾಗಿ ಆಹ್ವಾನಿಸಿರುವುದು ಖಂಡಿತವಾಗಿಯೂ ತಪ್ಪು. ಈ ತಪ್ಪಿಗೆ ಕ್ಷಮೆಯೇ ಇಲ್ಲ. ಆದರೆ ಈ ವಿಚಾರದಲ್ಲಿ ನನ್ನ ಕಡೆಯಿಂದ ಯಾವುದೇ ರೀತಿಯ ವ್ಯವಸ್ಥೆ ಆಗಿರದಿದ್ದರೂ ಈ ಘಟನೆಯ ಸಂಪೂರ್ಣ ಹೊಣೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ನೆಲೆಯಲ್ಲಿ ಸಂಪೂರ್ಣವಾಗಿ ಹೊತ್ತುಕೊಂಡು ತಮ್ಮೆಲ್ಲರ ಕ್ಷಮೆಯನ್ನು ಯಾಚಿಸುತ್ತೇನೆ. ಮುಂದಿನ ದಿನಗಳಲ್ಲಿ ಇಂತಹಾ ತಪ್ಪುಗಳು ಮರುಕಳಿಸದಂತೆ ಜಾಗ್ರತೆ ವಹಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ, ಜಾತ್ಯಾತೀತ ನಿಲುವನ್ನು ಮನಸಾರೆ ಒಪ್ಪಿ ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ಹುದ್ದೆಯ ಘನತೆ ಗೌರವಗಳಿಗೆ ಯಾವುದೇ ರೀತಿಯ ಚ್ಯುತಿ ಬಾರದ ರೀತಿಯಲ್ಲಿ ಇನ್ನು ಮುಂದೆಯೂ ನಡೆದುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವ ಬದ್ಧತೆಯನ್ನು ಹೊಂದಿದ್ದೇನೆ.
ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಎಳ್ಳಷ್ಟೂ ಲೋಪ ಬಾರದ ಹಾಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಕ್ಷವನ್ನು ಇನ್ನಷ್ಟು ಸಂಘಟಿಸಲು ಕಟಿಬದ್ಧನಾಗಿ ಇನ್ನು ಮುಂದೆಯೂ ಕಾರ್ಯ ನಿರ್ವಹಿಸುತ್ತೇನೆ ಎಂಬ ವಾಗ್ದಾನವನ್ನು ಈ ಸಂದರ್ಭದಲ್ಲಿ ತಮಗೆ ನೀಡುತ್ತಿದ್ದೇನೆ.
ಆಗಿ ಹೋದ ತಪ್ಪಿಗೆ ಕ್ಷಮೆ ಇರಲಿ.
ಪಕ್ಷ ಸಂಘಟನೆಯ ಕಾರ್ಯದಲ್ಲಿ ತಮ್ಮೆಲ್ಲರ ಪ್ರೀತಿ ವಿಶ್ವಾಸ ಸಹಕಾರವನ್ನು ಮತ್ತೊಮ್ಮೆ ಯಾಚಿಸುತ್ತೇನೆ ಎಂದು ಎಂ.ಬಿ.ವಿಶ್ವನಾಥ ರೈ ತಿಳಿಸಿದ್ದಾರೆ.