ಮನುಷ್ಯ ಜೀವನ ಅದೆಷ್ಟು ಕ್ಷಣಿಕ… ✍️ಹೈದರ್ ಆಲಿ ಐವತ್ತೊಕ್ಲು

ಅಲ್ಲಿ ಕೋಟ್ಯಾಧಿಪತಿಗಳಿದ್ದರು. ದೊಡ್ಡ ದೊಡ್ಡ ಉದ್ಯಮಿಗಳಿದ್ದರು. ರಾಜ್ಯವನ್ನಾಳಿದ ಮುಖ್ಯಮಂತ್ರಿಯಿದ್ದರು. ಬದುಕು ತುಂಬಾ ಕನಸುಗಳನ್ನು ಹೊತ್ತು ಹೊರಟ ಮಕ್ಕಳು, ಯುವಕ ಯುವತಿಯರಿದ್ದರು. ವೃದ್ಧರಿದ್ದರು.ಹಿಂದು ಇದ್ದರು. ಮುಸ್ಲಿಂ ಇದ್ದರು. ಕ್ರೈಸ್ತರಿದ್ದರು. ದೇಶಿಗರಿದ್ದರು,ವಿದೇಶಿಗರೂ ಇದ್ದರು…
ಆದರೆ,ಕ್ಷಣಾರ್ಧದಲ್ಲಿ ಭೀಕರ ದುರಂತಕ್ಕೊಳಗಾಗಿ ಗುರುತು ಹಿಡಿಯಲಾಗದ ರೂಪದಲ್ಲಿ ಸುಟ್ಟು ಕರಕಲಾದರು. ಬೀಳ್ಕೊಡಲು ಬಂದವರು ತಮ್ಮ ವಾಹನದ ಬಳಿ ಇನ್ನೂ ತಲುಪಿಲ್ಲ, ಅವರಾಪ್ತರು ಕಣ್ಣ ಮುಂದೆಯೇ ಬದುಕಿಗೇ ವಿದಾಯ ಹೇಳಿದರು…
ಏನೂ ಅರಿಯದ ಪಕ್ಕದ ಕಟ್ಟದಲ್ಲಿದ್ದ, ಭವಿಷ್ಯದ ವೈದ್ಯ ವಿದ್ಯಾರ್ಥಿಗಳು ಬಾಯಿಗಿಟ್ಟ ತುತ್ತು ಅರಗಿಸಿಕೊಳ್ಳವಷ್ಟರಲ್ಲಿ ವಿಮಾನ ಯಮದೂತನಾಗಿ ಬಂದೆರಗಿತು…
ಎಲ್ಲಾ ಕನಸುಗಳು, ಯೋಜನೆಗಳು, ಯೋಚನೆಗಳು, ಸಂಬಂಧಗಳು….ಇನ್ನೂ ಏನೇನೋ, ಸುಟ್ಟು ಬೂದಿಯಾದವು.
ಹೃದಯವಿದ್ರಾವಕ ಘಟನೆ…ಮನುಷ್ಯ ಜೀವನ ಅದೆಷ್ಟು ಕ್ಷಣಿಕ.ಲೈಫು ಇಷ್ಟೇನೇ!!
ಮನುಷ್ಯ ಅಧಿಕಾರ, ಶ್ರೀಮಂತಿಕೆ, ರಾಜಕೀಯದ ಅಮಲಿನಲ್ಲಿ , ತನಗೆ ಸಾವೇ ಇಲ್ಲ ಎಂದು ಭಾವಿಸಿ ಹಿಂಸೆ, ಭ್ರಷ್ಟಾಚಾರ, ಅನಾಚಾರ, ಕೋಮುದಳ್ಳುರಿ…ಹೀಗೆ ಒಟ್ಟಾರೆ ದೇವರನ್ನು ಮರೆತು ಬದುಕುವುದಾದರೂ ಯಾಕೆ? ಮರಣ ಕ್ಷಣ ಮಾತ್ರದಲ್ಲಿ ಬಂದೆರಗಹಬಹುದು.. ಭೂಕಂಪ,ಸುನಾಮಿ,ಭೂಕುಸಿತ, ಅತಿವೃಷ್ಟಿ …ಮುಂತಾದ ಪ್ರಾಕೃತಿಕ ವಿಕೋಪಗಳು, ಕೋರೋನದಂತಹ ರೋಗಗಳು,ಅಪಘಾತಗಳು ಕ್ಷಣ ಮಾತ್ರದಲ್ಲಿ ಎಲ್ಲವನ್ನೂ ನುಚ್ಚು ನೂರು ಮಾಡುತ್ತೆ..ಇದರಿಂದ ನಾವು ಕಲಿಯಲು ಸಾಕಷ್ಟಿದೆ..
ಸಾವು ನಿಶ್ಚಿತ. ಈ ಬದುಕು ಕ್ಷಣಿಕ .ಇದ್ದಷ್ಟು ದಿನ ದ್ವೇಷ,ಹಗೆತನ ಮರೆತು ಪ್ರೀತಿ-ವಿಶ್ವಾಸ,ಸಹೋದರತೆಯಿಂದ ಬಾಳುವುದೇ ಬದುಕಿನ ಸಾರ್ಥಕತೆ.
ವಿಮಾನ ದುರಂತದಲ್ಲಿ ಅಗಲಿದವರಿಗೆ ಸದ್ಗತಿ ದೊರೆಯಲಿ. ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ದೇವರು ನೀಡಲಿ.
✍️ಹೈದರ್ ಆಲಿ ಐವತ್ತೊಕ್ಲು