ಆಟೋ ರಿಕ್ಷಾ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ; ಚಾಲಕ ಸಾವು
ಬೆಳ್ತಂಗಡಿ: ಆಟೋ ರಿಕ್ಷಾ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಚಾಲಕ ಮೃತಪಟ್ಟ ಘಟನೆ ಮಂಗಳವಾರ ಕೊಕ್ಕಡ ಸಮೀಪದ ಕೆಂಪಕೋಡಿನಲ್ಲಿ ಸಂಭವಿಸಿದೆ.

ಕೆಂಪಕೋಡು ನಿವಾಸಿ ಶರತ್ ಕುಮಾರ್ ಕೆ (36ವ) ಮೃತ ಚಾಲಕ. ಶರತ್ ಕುಮಾರ್ ಅವರು ಪ್ರತಿದಿನದಂತೆ ಬೆಳಗ್ಗೆ ತಮ್ಮ ಆಟೋದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಬಿಟ್ಟು ವಾಪಾಸ್ಸಾಗುತ್ತಿದ್ದ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಸ್ಥಳೀಯರು ಶರತ್ ಅವರನ್ನು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರೂ ಅದಾಗಲೇ ಅವರು ನಿಧನ ಹೊಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ ಶರತ್ ಕುಮಾರ್ ಅವರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.