ಆಪರೇಷನ್ ಸಿಂಧೂರ್: ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆ – ಸಿದ್ದರಾಮಯ್ಯ
ಬೆಂಗಳೂರು: ದೇಶದ ಸೇನಾಪಡೆಯು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ ಪರಾಕ್ರಮ ಮೆರೆದಿದ್ದು ರಾಷ್ಟ್ರೀಯ ಭದ್ರತೆ ವಿಷಯಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ. ಈ ದಾಳಿಯನ್ನು ಎಲ್ಲರೂ ಬೆಂಬಲಿಸಿದ್ದೇವೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಆಪರೇಷನ್ ಸಿಂಧೂರ ಹೆಸರಿನಲ್ಲಿ ಸುಮಾರು 9 ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿದೆ. ಕೇವಲ ಉಗ್ರಗಾಮಿಗಳ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಲಾಗಿದೆ. ನಮ್ಮ ಸೈನಿಕರು ಉಗ್ರರ ನೆಲೆಗಳನ್ನು ಪತ್ತೆ ಹಚ್ಚಿ ದಾಳಿ ಮಾಡಿದ್ದು, ಅಮಾಯಕ ಜನರ ಸಾವು ನೋವು ತಪ್ಪಿಸಿದ್ದಾರೆ. ನಮ್ಮ ಸೈನಿಕರ ಕಾರ್ಯದಕ್ಷತೆಗೆ ದೊಡ್ಡ ಸಲಾಂ. ಈ ದಾಳಿಯನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.
ನಾವು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದೇವೆ. ರಾಜ್ಯದಲ್ಲಿ ಸುರಕ್ಷತೆಯ ಕುರಿತು ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದ ಅವರು ಇದು ಪಾಕಿಸ್ಥಾನಕ್ಕೆ ಮಾತ್ರವಲ್ಲ ಭಾರತದ ಜೊತೆ ಈ ರೀತಿಯ ಕಿಡಿಗೇಡಿತನವನ್ನು ನಡೆಸುವ ನೆರೆಯ ಎಲ್ಲ ದೇಶಗಳಿಗೆ ಕೂಡಾ ಇಂದಿನ ಸೇನಾದಾಳಿ ಎಚ್ಚರಿಕೆಯ ಗಂಟೆಯಾಗಿದೆ ಎಂದು ಅವರು ತಿಳಿಸಿದರು.