ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್ ಸಂಸ್ಥೆಯು ಉನ್ನತ ವಿದ್ಯಾಭ್ಯಾಸ ಪಡೆಯಲುದ್ದೇಶಿಸುವ ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾಗಿ ಮೂಡಿಬರುತ್ತಿದೆ- ರಫೀಕ್ ಮಾಸ್ಟರ್
ಪುತ್ತೂರು: ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್ ಸಂಸ್ಥೆಯು ಉನ್ನತ ವಿದ್ಯಾಭ್ಯಾಸ ಪಡೆಯಲುದ್ದೇಶಿಸುವ ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾಗಿ ಮೂಡಿಬರುತ್ತಿದ್ದು ಇದಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದು ಖ್ಯಾತ ತರಬೇತುದಾರ ರಫೀಕ್ ಮಾಸ್ಟರ್ ಮಂಗಳೂರು ಅಭಿಪ್ರಾಯಪಟ್ಟಿದ್ದಾರೆ.

ಅವರು ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಪುತ್ತೂರು ಬೊಳ್ವಾರು ಮಹಾವೀರ ಹಾಲ್‌ನಲ್ಲಿ ನಡೆದ ಮಾಹಿತಿ ಮತ್ತು ಸ್ಕಾಲರ್‌ಶಿಪ್ ಕಾರ್ಯಕ್ರಮದಲ್ಲಿ ಪ್ರೇರಣಾ ತರಬೇತಿ ನೀಡಿ ಮಾತನಾಡಿದರು. ವಿದ್ಯಾರ್ಥಿಗಳ ಕಲಿಕೆಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಸಿಕ್ಕಿದಾಗ ಅವರು ಭವಿಷ್ಯದಲ್ಲಿ ಸಾಧನೆ ಮಾಡುತ್ತಾರೆ, ಇಂದು ಕಲಿಕೆಗೆ ಸಾಕಷ್ಟು ಅವಕಾಶಗಳಿದ್ದು ಅದನ್ನು ಅರ್ಥ ಮಾಡಿಕೊಳ್ಳುವ ಮೂಲಕ ಪೋಷಕರು ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಶಿಕ್ಷಣದ ಮಹತ್ವದ ಬಗ್ಗೆ ವಿವರಿಸಿದ ಅವರು ವಿವಿಧ ಸಾಧಕರ ಸಾಧನೆಯನ್ನು ಉದಾಹರಣೆಯೊಂದಿಗೆ ವಿವರಿಸಿ ಸೇರಿದ್ದವರನ್ನು ಹುರಿದುಂಬಿಸಿದರು.
ಮಾಹಿತಿ ಮತ್ತು ಸಂಪರ್ಕ ಇಲಾಖೆಯ ದ.ಕ ಜಿಲ್ಲಾ ಮಾಹಿತಿ ಅಧಿಕಾರಿ ಬಿ.ಎ ಖಾದರ್ ಶಾ, ಮೌಂಟೆನ್ ವ್ಯೂ ಎಜುಕೇಶನಲ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಕೆ.ಪಿ ಅಹ್ಮದ್ ಹಾಜಿ ಆಕರ್ಷಣ್, ಕೆಎಂಸಿ ವೈದ್ಯಕೀಯ ಪ್ರಾಧ್ಯಾಪಕ ಡಾ.ತಾಜುದ್ದೀನ್, ಅಮೆಝೋನ್ ಸೀನಿಯರ್ ಸಾಫ್ಟ್‌ವೇರ್ ಡೆವಲಪರ್ ಎನ್‌ಐಟಿಕೆಯ ಇಮ್ರಾನ್ ಖಾನ್ ಮಾತನಾಡಿದರು.
ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್‌ನ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು