ಕರಾವಳಿ

ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್‌ನಿಂದ ‘ಬಿ.ಜಿ.ಎಫ್ ಆದರ್ಶ ವಿದ್ಯಾರ್ಥಿ’ ಪ್ರಶಸ್ತಿ ಪ್ರಕಟ: ಚೊಚ್ಚಲ ಪ್ರಶಸ್ತಿಗೆ ಇಂಜಿನಿಯರಿಂಗ್ ವಿದ್ಯಾರ್ಥಿ ಮುಹಮ್ಮದ್ ರಯೀಸ್ ಆಯ್ಕೆ

ಪುತ್ತೂರು: ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಪ್ಪಳಿಗೆ ಊರಿನ ಹಾಗೂ ಅನಿವಾಸಿ ಯುವಕರ ತಂಡವಾಗಿರುವ  ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ಬಳಗವು ಶೈಕ್ಷಣಿಕ ವಿಭಾಗದ ಸೇವೆಯೆಂಬಂತೆ ಆದರ್ಶ ವಿದ್ಯಾರ್ಥಿಯೊಬ್ಬನನ್ನು ಆಯ್ಕೆ ಮಾಡಿ ‘ಬಿ.ಜಿ.ಎಫ್ ಆದರ್ಶ ವಿದ್ಯಾರ್ಥಿ ಪ್ರಶಸ್ತಿ-2025’ ನೀಡಿ ಸನ್ಮಾನಿಸಲಿದೆ.



ಶಿಸ್ತು, ಧಾರ್ಮಿಕ ಶ್ರದ್ಧೆ ಹಾಗೂ ಉತ್ತಮ ಗುಣ ನಡತೆಯೊಂದಿಗೆ ವೃತ್ತಿಪರ ಕೋರ್ಸ್ ಅಧ್ಯಯನ ನಡೆಸುತ್ತಿರುವ ಮಾದರಿ  ವಿದ್ಯಾರ್ಥಿಯೊಬ್ಬನನ್ನು ಅರ್ಹತೆ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಆರ್ಥಿಕ ಅಗತ್ಯ ಮಾನದಂಡಗಳ ಆಧಾರದ ಮೇಲೆ ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿದ್ಯಾರ್ಥಿಗಳು ಮಾದಕ ವಸ್ತುಗಳತ್ತ ಆಕರ್ಷಿತಾಗುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಮತ್ತು ಆ ಮೂಲಕ ವಿದ್ಯಾರ್ಥಿ ಸಮೂಹವನ್ನು ಮಾದರಿ ವಿದ್ಯಾರ್ಥಿಗಳನ್ನಾಗಿ ಪ್ರೇರೇಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಸಮಿತಿ ಅಧ್ಯಕ್ಷ ಬಿ.ಟಿ ನಝೀರ್ ತಿಳಿಸಿದ್ದಾರೆ.


ಬಪ್ಪಳಿಗೆ ಮೊಹಲ್ಲಾ ನಿವಾಸಿ ಅಬ್ದುಲ್ ರಹೀಂ(ಗಾಡ್ ಗಿಫ್ಟ್) ಹಾಗೂ ಅಸ್ಮಾ ದಂಪತಿಗಳ ಪುತ್ರನಾದ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ವಿಭಾಗದ ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಮುಹಮ್ಮದ್ ರಯೀಸ್‌ರವರನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಾ.27ರಂದು ರಾತ್ರಿ ಬಪ್ಪಳಿಗೆ ಮಸೀದಿಯಲ್ಲಿ ಖತೀಬರಾದ ಸಿರಾಜುದ್ದೀನ್ ಫೈಝಿಯವರ ಮಾರ್ಗದರ್ಶನದಲ್ಲಿ ನಡೆಯುವ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ರೂ.27 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂದಿರುತ್ತದೆ.

ಮಸೀದಿ ಅಧ್ಯಕ್ಷ ದಾವೂದ್ ಅಧ್ಯಕ್ಷತೆ ವಹಿಸಲಿದ್ದು, ಮಸೀದಿ ಮದ್ರಸಾದ ಉಲಮಾಗಳು, ಮೊಹಲ್ಲಾ ಸಮಿತಿ ಪದಾಧಿಕಾರಿಗಳು, ಅನ್ಸಾರುಲ್ ಇಸ್ಲಾಂ ಯುವಕ ಸಮಿತಿ ಸಾರಥಿಗಳು, ಮೊಹಲ್ಲಾ ಬಾಂಧವರ ಉಪಸ್ಥಿತರಿರಲಿದ್ದಾರೆ. ಪುತ್ತೂರಿನ ವೈದ್ಯರಾದ ಕೆ.ಕೆ ನಝೀರ್ ಅಹ್ಮದ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ಪ್ರಕಟನೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!